ಹುಬ್ಬಳ್ಳಿ: ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಹೈಕಮಾಂಡ್ ಏನೂ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ದ. ಅಲ್ಲದೇ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವಿಚಾರವಾಗಿ ಧಾರವಾಡ, ಹಾವೇರಿ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಹೈಕಮಾಂಡ್ ಗೆ ಬೇಡಿಕೆ ಇಟ್ಟಿದೆ, ಆದರೆ ಬೇರೆ ಬೇರೆ ಕಾರಣದಿಂದ ಅದು ಕೈ ತಪ್ಪಿದೆ. ಹೀಗಾಗಿ ಆ ವಿಚಾರವಾಗಿ ನಾನು ಹೆಚ್ಚು ಮಾತನಾಡುವುದಿಲ್ಲಎಂದು ಹೇಳಿದರು.
ಬೆಳಗಾವಿಯಲ್ಲಿ ಶೆಟ್ಟರ್ ಗೋಬ್ಯಾಕ್ ಅಭಿಯಾನದ ವಿಚಾರವಾಗಿ ಮಾತನಾಡಿ, ಬೆಳಗಾವಿಯಲ್ಲಿ ಪರಿಸ್ಥಿತಿ ಸರಿಯಿಲ್ಲ ನಾನು ಈಗಾಗಲೇ ಬೆಳಗಾವಿ ಜಿಲ್ಲೆಯ ನಾಯಕರ ಜೊತೆಗೂ ಚರ್ಚೆ ನಡೆಸಿದ್ದೇನೆ. ಟಿಕೆಟ್ ನೀಡಿದ ಬಳಿಕ ಎಲ್ಲ ಸರಿ ಹೋಗಲಿದೆ. ಸದ್ಯ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ತೀರ್ಮಾನ ಆಗಿಲ್ಲ, ಚರ್ಚೆ ಹಂತದಲ್ಲಿದೆ ಎಂದರು.
ಶೆಟ್ಟರ್ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ಅದನ್ನು ನಾನು ಮಾತನಾಡುವುದಿಲ್ಲ. ನಮ್ಮ ಬೆಂಬಲಿಗರು ಹೇಳುತ್ತಾರೆ. ಅಷ್ಟೇ ಅಲ್ಲದೇ ಜನರಿಗೆ ಗೊತ್ತಿದೆ. ಅವರೇ ಪಾಠ ಕಲಿಸತ್ತಾರೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕೆಂಬ ಆಸೆ ಎಲ್ಲರಿಗೂ ಇದ್ದು, ಅದರಂತೆ ಪಕ್ಷ ಗೆಲ್ಲಿಸಲು ಶ್ರಮಿಸಲಾಗುವುದು ಎಂದು ಹೇಳಿದರು.
ಇನ್ನೂ ಟಿಕೆಟ್ ವಿಚಾರವಾಗಿ ದೆಹಲಿಗೆ ಹೋಗುವುದಿಲ್ಲ. ಬದಲಾಗಿ ಬೆಂಗಳೂರಿಗೆ ಹೋಗುವ ಸಾಧ್ಯತೆಯಿದೆ. ಖಂಡಿತವಾಗಿ ಈ ಬಾರಿ ಲೋಕಸಭಾ ಟಿಕೆಟ್ ಸಿಗುವ ಭರವಸೆ ಇದೆ ಎಂದ ಅವರು, ಲೋಕಸಭಾ ಟಿಕೆಟ್ ಬಳಿಕ ಶೆಟ್ಟರ್ ಕಾಂಗ್ರೆಸ್ ತೊರೆದಿರುವುದಕ್ಕೆ ಪಶ್ಚಾತ್ತಾಪ ಪಡುತ್ತಾರೆ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾನು ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೋದಾಗ ಪಶ್ಚಾತ್ತಾಪ ಪಟ್ಟಿಲ್ಲ. ಬೇರೆಯವರಿಗೆ ಪಶ್ಚಾತ್ತಾಪ ಪಡಿಸುತ್ತೇನೆ ಎಂದರು.