ಹುಬ್ಬಳ್ಳಿ: ಮಹಾದಾಯಿ ಯೋಜನೆಗೆ ಹಿನ್ನಡೆಯಾಗಲು ಕಾಂಗ್ರೆಸ್ ಪಕ್ಷವೇ ನೇರ ಕಾರಣವಾಗಿದ್ದು, ಅವರು ಟ್ರಿಬ್ಯುನಲ್ ಗೆ ಹೋಗಿದ್ದರಿಂದ 8-10 ವರ್ಷ ವಿಳಂಬವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಮಹದಾಯಿ ಯೋಜನೆಗೆ ಹಿನ್ನಡೆಯಾಗಿದ್ದರೇ ಅದಕ್ಕೆ ನೇರವಾದ ಕಾಂಗ್ರೆಸ್ ಪಕ್ಷವೇ, ಈ ಹಿಂದೆ ಮೊಟ್ಟಮೊದಲ ಟ್ರಿಬ್ಯೂನಲ್ ಹೋಗುವ ಅವಶ್ಯಕತೆ ಇರಲಿಲ್ಲ, ಮನಮೋಹನ್ ಸಿಂಗ್ ಪ್ರಧಾನಿಗಳಿದ್ದಾಗ ಟ್ರಿಬ್ಯೂನಲ್ ಮಾಡಿದ್ದು ಕಾಂಗ್ರೆಸ್ ಪಕ್ಷ, ಅದರಿಂದ 8-10 ವರ್ಷ ವಿಳಂಬವಾಯಿತು. ಅತ್ಯಂತ ದೊಡ್ಡ ತಪ್ಪು ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.
ಕಾಂಗ್ರೆಸ್ ನವರು ಗೋಡೆ ಕಟ್ಟಿದರು. ಟ್ರಿಬ್ಯೂನಲ್’ನಲ್ಲಿ ಬರೆದು ಕೊಟ್ಟು ಮಹದಾಯಿಯಿಂದ ಮಲಪ್ರಭಾ ಇಂಟರ್ ಲಿಂಕಿಂಗ್ ಜೋಡನೆಗೆ ಕಾಂಗ್ರೆಸ್’ನವರು ಗೋಡೆ ಕಟ್ಟಿದ್ದರು, ನೀರಾವರಿ ಯೋಜನೆಗೆ ಗೋಡೆಕಟ್ಟಿದ ಅಪಖ್ಯಾತಿ ಇದ್ದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಇದೆ. ನಾವು ಕಾಲುವೆ ಮಾಡಿದರೆ ಕಾಂಗ್ರೆಸ್ ನವರು ಗೋಡೆ ಕಟ್ಟಿದರು ಎಂದರು.
ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಸಂಪೂರ್ಣವಾಗಿ ವಿರೋಧ ಮಾಡತ್ತ ಬಂದರು. ನಮ್ಮ ಸರ್ಕಾರ ಗೋವಾದಲ್ಲಿದ್ದರು ಬಿಜೆಪಿ ಯೋಜನೆಯ ಡಿಪಿಆರ್ ಅನುಮೋದನೆ ಕೊಟ್ಟಿದೆ. ಇವರ ಕೈಯಲ್ಲಿ ಅಧಿಕಾರದಲ್ಲಿದ್ದು ಡಿಪಿಆರ್ ಅನುಮೋದನೆ ಮಾಡಿಸಲು ಆಗಿರಲಿಲ್ಲ, ಇದೀಗ ಪರಿಸರ ಇಲಾಖೆಯಲ್ಲಿ ಅನುಮೋದನೆ ಬಾಕಿ ಇದೆ. ಅವರು ಕೆಲವು ದಾಖಲೆಗಳನ್ನು ಕೇಳಿದ್ದಾರೆ. ಇವರು ಸರಿಯಾದ ದಾಖಲೆಗಳನ್ನು ನೀಡಿದರೆ, ನಾವು ಕೇಂದ್ರದ ಮೇಲೆ ಒತ್ತಡ ತಂದು ಪರಿಸರ ಇಲಾಖೆಯಿಂದ ಅನುಮೋದನೆ ಕೊಡಿಸತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಪರಿಸರ ಇಲಾಖೆಯ ಅನುಮೋದನೆ ಪಡೆಯದೇ ಟೆಂಡರ್ ಮಾಡುವ ಕೆಲಸ ಮಾಡಿದೆ. ಇದರಿಂದ ಕೆಲಸ ಮಾಡಲು ಸಾಧ್ಯವೇ? ಹಾಗಾಗಿ ಗೋವಾ ಸರ್ಕಾರ ಕೋರ್ಟ್’ಗೆ ಹೋಗಿದ್ದಾರೆ ಎಂದು ತಿಳಿಸಿದರು.
ರಾಜ್ಯದ ನೀರಾವರಿ ಯೋಜನೆಗಳಾದ ಕೃಷ್ಣ, ಮಹದಾಯಿ, ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಕೋರ್ಟ್’ನಲ್ಲಿ ಸಮರ್ಥವಾಗಿ ವಾದ ಮಾಡಬೇಕು. ಈ ಹಿಂದೆ ಕೃಷ್ಣ ಯೋಜನೆಗೆ 2010 ಡಿಸೆಂಬರ್ ಟ್ರಿಬ್ಯೂನಲ್ಲಿ ಆದೇಶ ಬಂದಿದೆ. ಆದರೂ ಕಾಂಗ್ರೆಸ್ ಅದನ್ನು ವಿರೋಧಿಸಿ ಕೋರ್ಟ್ ಗೆ ಒಂದು ಅರ್ಜಿಯನ್ನೂ ಹಾಕಲಿಲ್ಲ. ಮಹಾರಾಷ್ಟ್ರದವರು ಹಾಕಿದ ಅರ್ಜಿಯ ಹಿಂದೆ ಬಾಲಂಗೋಚಿಯ ಥರ ಹೋದರು. ನಾವು ಅಧಿಕಾರದಲ್ಲಿದ್ದಾಗ 5000 ಕೋಟಿ ರೂ. ಹಣ ಮೀಸಲಿಟ್ಟು ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಪ್ರಲ್ಹಾದ್ ಜೋಶಿ, ಬಸವರಾಜ ಬೊಮ್ಮಾಯಿ ರಾಜ್ಯದ ಜನತೆಗೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಸುಳ್ಳು ಹೇಳತ್ತಾರೆ ಸತ್ಯ ಹೇಳತ್ತಾರೆ ಎನ್ನುವುದು ಜನರಿಗೆ ಗೊತ್ತಿದೆ. ಕಾಂಗ್ರೆಸ್’ನವರು ಸತ್ಯ ಹರಿಶ್ಚಂದ್ರರಾ? ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿಯವರು ನುಡಿದಂತೆ ನಡೆದಿದ್ದಾರೆ. ಅವರು ಕೇಂದ್ರದ ಅನುದಾನ ಹಂಚಿಕೆ ಕುರಿತು ಮುಖ್ಯಮಂತ್ರಿ ಯಾಗಿದ್ದಾಗ ಏನು ಆಗ್ರಹ ಮಾಡಿದ್ದರೋ ಅದನ್ನು ಪ್ರಧಾನಿಯಾದ ಮೂರೇ ತಿಂಗಳಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಬರುವ ತೆರಿಗೆ ಪಾಲಿನಲ್ಲಿ ಶೇ 32% ರಿಂದ ಶೇ 42 ಕ್ಕೆ ಹೆಚ್ಚಳ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನವರು ಕೇಂದ್ರದ ವಿರುದ್ದ ನಿರ್ಣಯ ಮಂಡಿಸಿದರೆ, ನಾವೂ ಕೇಂದ್ರದ ಪರ ನಿರ್ಣಯ ಮಂಡಿಸಿದ್ದೇವೆ ಎರಡೂ ಜನರ ಮುಂದೆ ಹೋಗುತ್ತವೆ ಎಂದು ಹೇಳಿದರು.