ಹಾವೇರಿ: ತೀವ್ರ ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ರಾಣೆಬೆನ್ನೂರು ಹಾಗೂ ಹಾವೇರಿ ನಗರಗಳಿಗೆ ತಕ್ಷಣವೇ ಕುಡಿಯುವ ನೀರು ಒದಗಿಸುವಂತೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಹಾವೇರಿ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಅವರು, ರಾಣೆಬೆನ್ನೂರಿನಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಇನ್ನೆರಡು ದಿನ ಕಳೆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದ್ದು, ಜನರು ತೀರ ಸಂಕಷ್ಟ ಎದುರಿಸುವಂತಾಗಿದೆ.
ತುಂಗಭದ್ರಾ ನದಿಯಿಂದ ರಾಣೆಬೆನ್ನೂರು ಹಾಗೂ ಹಾವೇರಿಗೆ ಬೇಸಿಗೆಯಲ್ಲಿ ಮಳೆಗಾಲ ಆರಂಭವಾಗುವವರೆಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಅಗತ್ಯತೆಯ ಬಗ್ಗೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ತಕ್ಷಣವೇ ಕುಡಿಯುವ ನೀರು ಬಿಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ಸೂಚಿಸಿದರು. ಅಲ್ಲದೇ ತಾವೂ ಕೂಡ ಪ್ರಾದೇಶಿಕ ಆಯುಕ್ತರೊಂದಿಗೆ ಮಾತನಾಡುವುದಾಗಿ ಹಾವೇರಿ ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.