ಹಾಸನ: ಮುಂದಿನ ಐದು ವರ್ಷಗಳ ಕಾಲ.. ಇದೇ ಗ್ಯಾರಂಟಿ ಸ್ಕೀಮ್ಗಳನ್ನು ಮುಂದುವರಿಸಿ ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಡೆ-ತಡೆ ಇಲ್ಲದೇ ಮುಂದುವರಿಯಲು ಸಾಧ್ಯವಾಗುತ್ತದೆ. ಅದಕ್ಕೆ ನಿಮ್ಮ ಬೆಂಬಲ ಮತ್ತು ಆಶೀರ್ವಾದ ಇರಲಿ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಹಾಸನದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.. ಸಿದ್ದರಾಮಯ್ಯರವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಹೆಚ್ಚು ಸ್ಥಾನ ಗೆದ್ದರೆ ಯಾವುದೇ ಅಡೆತಡೆ ಇಲ್ಲದೆ ಐದು ವರ್ಷ ಸಿಎಂ ಆಗಿರುತ್ತಾರೆ. ಸರ್ಕಾರಕ್ಕೆ ಒಂದು ವರ್ಷ ತುಂಬುವ ಮೊದಲೇ ಸಿಧ್ದರಾಮಯ್ಯ ಅವರು ಐದು ಗ್ಯಾರಂಟಿ ಜಾರಿ ಮಾಡಿದ್ದಾರೆ. ಮತ್ತೊಮ್ಮೆ ನುಡಿದಂತೆ ನಡೆಯುವುದಾಗಿ ಸಾಬೀತು ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ನೈತಿಕವಾಗಿ ಅವರಿಗೆ ಮತ್ತಷ್ಟು ಬೆಂಬಲ ಸಿಗುತ್ತದೆ ಎಂದಿದ್ದಾರೆ.
ಗ್ಯಾರೆಂಟಿ ಯೋಜನೆಗೆ ವರ್ಷಕ್ಕೆ 56 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಇಷ್ಟೊಂದು ಹಣ ಖರ್ಚು ಮಾಡುತ್ತಿರುವಾಗ ಜನರ ಬೆಂಬಲ ಬೇಕು. ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯಲು ಸಾಧ್ಯವಾಗುತ್ತದೆ. ಹಾಗಾಗಿ ನಿಮ್ಮ ಬೆಂಬಲ ಆಶೀರ್ವಾದ ಅವರ ಮೇಲೆ ಇರಲಿ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಈ ನಡುವೆ ಮುಂದಿನ ಪ್ರದಾನಿ ಸಿದ್ದರಾಮಯ್ಯ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ನೀವು ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದರಿಂದ ಅವರು ಎರಡನೇ ಬಾರಿ ಸಿಎಂ ಆದರು ಎಂದರು.
ಎಲ್ಲರ ಅಚ್ಚರಿಗೆ ಕಾರಣವಾದ ಡಿಕೆಶಿ ಹೇಳಿಕೆ
ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದರ ಮಧ್ಯೆ ಡಿಕೆ ಶಿವಕುಮಾರ್ ಅವರು ಮಾತನಾಡಿ ಸಿದ್ದರಾಮಯ್ಯ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತೆ. ಅದರಲ್ಲಿ ಅನುಮಾನ ಬೇಡ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಹೌದು.. ಸಿದ್ದರಾಂಯ್ಯನವರ ನೇತೃತ್ವದಲ್ಲೇ ಈ ಬಾರಿ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ಕಾಂಗ್ರೆಸ್ನ ನಾಯಕರಿಗೆ ಅಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ, ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಬಂದ ಬಳಿಕ ಮುಖ್ಯಮಂತ್ರಿ ಹುದ್ದೆ ತಮಗೆ ನೀಡಲೇಬೇಕೆಂದು ಹೈಕಮಾಂಡ್ ಬಳಿ ಡಿಕೆ ಶಿವಕುಮಾರ್ ಪಟ್ಟು ಹಿಡಿದು ಕುಳಿತ್ತಿದ್ದರು. ಕೊನೆಗೆ ಹೈಕಮಾಂಡ್ ನಾಯಕರು ಎಲ್ಲರೂ ಸೇರಿ ಡಿಕೆ ಶಿವಕುಮಾರ್ ಅವರನ್ನು ಮನವೊಲಿಸಿ ಡಿಸಿಎಂಗೆ ಒಪ್ಪಿಸಿದ್ದರು. ಬಳಿಕ ಮುಂದಿನ ಎರಡು ವರ್ಷದ ಬಳಿಕ ಮುಖ್ಯಮಂತ್ರಿ ಸ್ಥಾನ ಬೇಕೆಂದು ಒಳಗೊಳಗೆ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್, ಇದೀಗ ಅಚ್ಚರಿ ಎಂಬಂತೆ ಈ ಬಾರಿ ಲೋಕಸಭಾ ಚುನಾವಣೆ ಸಿದ್ದರಾಮಯ್ಯನವರ ನೇತೃತ್ವದಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆ.