
ಗದಗ : 2024ರ ಲೋಕ ಅಖಾಡ ಇನ್ನೇನು ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷಗಳು ಗೆಲ್ಲುವ ಕುದುರೆಗಳನ್ನು ಹುಡುಕುತ್ತಿವೆ. ಅದರಂತೆ ಹಾವೇರಿ-ಗದಗ ಲೋಕಸಭೆ ಅಖಾಡ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಅಖಾಡವಾಗಿದೆ. ಕಳೆದ ಮೂರು ಬಾರಿ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿದ್ದ ಸಂಸದ ಶಿವಕುಮಾರ ಉದಾಸಿ ಚುನಾವಣಾ ನಿವೃತ್ತಿ ಘೋಷಿಸಿದ್ದು, ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ದಿನೇ-ದಿನೇ ಹೆಚ್ಚುತ್ತಿದೆ. ಇತ್ತ ಕಾಂಗ್ರೆಸ್ ಪ್ರಭಲ ಅಭ್ಯರ್ಥಿ ಇಲ್ಲದೇ ಕಂಗಾಲಾಗಿದೆ. ಹೀಗಾಗಿ ಹಾಲಿ ಸಚಿವ ಹೆಚ್ಕೆ ಪಾಟೀಲರೇ ಲೋಕ ಅಖಾಡಕ್ಕೆ ಧುಮುಕುವ ಸಾಧ್ಯತೆ ದಟ್ಟವಾಗಿದೆ.

ಗದಗ-ಹಾವೇರಿ ಲೋಕಸಭಾ ಕ್ಷೇತ್ರ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದೆ. ಕಳೆದ ಮೂರು ಚುನಾವಣೆಯಲ್ಲಿಯೂ ನರೇಂದ್ರ ಮೋದಿಜಿ ಅಲೆಯಿಂದ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಿ ಬಿಜೆಪಿ ವಿಜಯದ ಪತಾಕೆ ಹಾರಿಸಿತ್ತು. ಆದರೆ, ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಹಾವೇರಿ ಗದಗ-ಲೋಕಸಭಾ ಕ್ಷೇತ್ರ ತಾನೊಂದುಕೊಂಡಂತೆ ಇಲ್ಲ. ಯಾಕೆಂದರೆ ಹಾವೇರಿಯ ಏಳು ವಿಧಾನಸಭಾ ಮತಕ್ಷೇತ್ರಗಳ ಪೈಕಿ ಆರು ಕ್ಷೇತ್ರ ಕಾಂಗ್ರೆಸ್ ಪಾಲಾಗಿದ್ದರೇ, ಲೋಕಸಭಾ ವ್ಯಾಪ್ತಿಗೆ ಬರುವ ಗದಗ ಜಿಲ್ಲೆಯ ಮೂರು ಮತಕ್ಷೇತ್ರಗಳ ಪೈಕಿ ಎರಡರಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಿದೆ. ವಿಚಿತ್ರವೆಂದರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ವಿಧಾನಸಭೆಯ ಬಲಾಬಲ ಇದ್ದರೂ ಗೆಲ್ಲುವ ಅಭ್ಯರ್ಥಿಯೇ ಸಿಗುತ್ತಿಲ್ಲ ಎನ್ನುವುದು ಹೈಕಮಾಂಡ್ ನಿದ್ದೆಗೆಡಿಸಿದೆ. ಹೀಗಾಗಿ ಹಾಲಿ ಸಚಿವರನ್ನೇ ಕಣಕ್ಕೆ ಇಳಿಸಲು ಹೈಕಮಾಂಡ್ ತೀರ್ಮಾನಿಸಿದೆ ಎಂದು ಬಲ್ಲ ಮೂಲಗಳಿಂದ ಪ್ರೀಡಂ ಟಿವ್ಹಿಗೆ ಮಾಹಿತಿ ಲಭ್ಯವಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊರತುಪಡಿಸಿ ಉಳಿದೆಲ್ಲ ಕಡೆ ದೊಡ್ಡ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಇದು ಲೋಕಸಭೆ ಚುನಾವಣೆವರೆಗೂ ಮುಂದುವರೆಯುತ್ತದೆ ಎಂದು ಹೇಳಲಾಗಲ್ಲ. ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆ ಹಾಕಿದ ಮತಗಳು ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷದತ್ತ ತಿರುಗುವ ಸಾಧ್ಯತೆವಾಗಿದೆ. ಹೀಗಾಗಿ ಬಿಜೆಪಿಯಲ್ಲಿ 10-15ಕ್ಕೂ ಹೆಚ್ಚು ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರ ಸುತ್ತಾಡುತ್ತಿದ್ದು ಹೈಕಮಾಂಡ್ ಸಂಪರ್ಕವನ್ನು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ನರಗುಂದ ಮತಕ್ಷೇತ್ರ ಬಾಗಲಕೋಟಿ ಲೋಕಸಭಾ ಕ್ಷೇತ್ರಕ್ಕೆ ಅನ್ವಯಿಸುತ್ತದೆ. ಇನ್ನುಳಿದಂತೆ ಗದಗ, ಶಿರಹಟ್ಟಿ, ರೋಣ ಮತಕ್ಷೇತ್ರಗಳು ಹಾವೇರಿ-ಗದಗ ಮತಕ್ಷೇತ್ರಗಳಿಗೆ ಒಳಪಡಲಿವೆ. ಇಲ್ಲಿ ಹಾಲಿ ಸಚಿವ ಹೆಚ್ ಕೆ ಪಾಟೀಲ್ ಪ್ರಭಾವಿಯಾಗಿದ್ದಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಅವರನ್ನೇ ಕಣಕ್ಕಿಳಿಸಿದರೆ ಗೆಲುವು ಸುಲಭ ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ.
ಹಾಲಿ ಸಂಸದ ಶಿವಕುಮಾರ ಉದಾಸಿ ಅವರ ವಿರುದ್ಧ ಎರಡು ಬಾರಿ ಸಲೀಂ ಅಹಮದ್ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದಕ್ಕೆ ಮೂಲ ಕಾರಣ ಹಿಂದೂಗಳು ಒಗ್ಗಟ್ಟಾಗಿ ಶಿವಕುಮಾರ ಉದಾಸಿಯವರನ್ನು ಬೆಂಬಲಿಸಿದ್ದು ಗೆಲುವಿಗೆ ಕಾರಣವಾಗಿತ್ತು. ಇದನ್ನು ಅರಿತ ಕಾಂಗ್ರೆಸ್ ಪಕ್ಷ ಕಳೆದ ಬಾರಿ ಗದಗ-ಹಾವೇರಿ ಲೋಕಸಭಾ ಕ್ಷೇತ್ರದಿಂದ ಡಿ ಆರ್ ಪಾಟೀಲರನ್ನು ಕಣಕ್ಕೆ ಇಳಿಸಿತ್ತು. ಡಿ. ಆರ್ ಪಾಟೀಲ್ ಈ ಭಾಗದ ಸಜ್ಜನ ರಾಜಕಾರಣಿ ಎಂದೇ ಪ್ರಖ್ಯಾತಿ ಪಡೆದವರು. ಆದರೆ, ನರೇಂದ್ರ ಮೋದಿಜಿ ಅಲೆಯ ಮುಂದೆ ಸಜ್ಜನ ರಾಜಕಾರಣಿಯೂ ಕೂಡಾ ಮಕಾಡೆ ಮಲಗಿದ್ದರು. ನಂತರ ಅವರು ಚುನಾವಣೆ ರಾಜಕೀಯ ನಿವೃತ್ತಿ ಘೋಷಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಇಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳ ಕೊರತೆಯಿಂದ ನೀರಿನಿಂದ ಹೋರಬಂದ ಮೀನಿನಂತೆ ಒದ್ದಾಡುತ್ತಿದೆ.
ನ್ಯಾಯವಾದಿ ಸಂದೀಪ್ ಪಾಟೀಲಗೆ ಬಿಜೆಪಿ ಟಿಕೆಟ್ ಅಂತಿಮ.?
ಭಾರತೀಯ ಜನತಾ ಪಕ್ಷದಲ್ಲಿ ಅಭ್ಯರ್ಥಿಗಳ ದೊಡ್ಡ ದಂಡೆ ಇದೆ. ಇದರ ನಡುವೆ ಖ್ಯಾತ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯವಾದಿ ಹಾನಗಲ್ ತಾಲೂಕಿನ ಸಂದೀಪ್ ಪಾಟೀಲ್ ಮುಂಚೂಣಿಯಲ್ಲಿ ಕಸರತ್ತು ನಡೆಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ಇವರು ಗುರುತಿಸಿಕೊಳ್ಳದಿದ್ದರೂ ಹೈಕಮಾಂಡ್ ಮಟ್ಟದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವ ಭರವಸೆ ಹೊಂದಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಈಗಾಗಲೇ ಸುತ್ತಾಟವನ್ನು ನಡೆಸಿದ್ದು, ಜನರ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಹಾವೇರಿ-ಗದಗ ಲೋಕಸಭಾ ಟಿಕೆಟ್ ಸಂದೀಪ ಪಾಟಿಲ್ ಅವರಿಗೆ ಅಂತಿಮವಾಗುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪನವರ ಪುತ್ರ ಕೆ. ಈ ಕಾಂತೇಶ್ ಈಗಾಗಲೇ ಕ್ಷೇತ್ರದಲ್ಲಿ ಕಾರ್ಯಕರ್ತರ ಮನೆ-ಮನೆಗೆ ಭೇಟಿ ಮಾಡುತ್ತಿದ್ದಾರೆ. ಜೊತೆಗೆ ಹಾಗೂ ಕಳೆದ ಮೂರು ಬಾರಿ ಸಚಿವ ಎಚ್ ಕೆ ಪಾಟೀಲರ ವಿರುದ್ಧ ಪರಭವಗೊಂಡಿರುವ ಅನಿಲ ಮೆಣಸಿನಕಾಯಿ ಅವ್ರು ಕೂಡ ಬೆಂಗಳೂರಿನಲ್ಲಿದ್ದು ತೆರೆಮರೆಯಲ್ಲಿ ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ.
ಕೈ ಗೆ ಅಭ್ಯರ್ಥಿಗಳ ಕೊರತೆ
ಬಿಜೆಪಿಗೆ ವ್ಯತಿರಿಕ್ತವಾದ ಪರಿಸ್ಥಿತಿ ಕಾಂಗ್ರೆಸ್ ನಲ್ಲಿ ಇದೆ. ಇಲ್ಲಿ ಮಾಜಿ ಶಾಸಕ ಜಿ ಎಸ್ ಗಡ್ಡದೇವರಮಠ ಅವರ ಪುತ್ರ ಆನಂದಯ್ಯ ಗಡ್ಡದೇವರ ಮಠ ಅವರು ಟಿಕೆಟ್ ಗಾಗಿ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಆದರೆ, ಇವರು ಪ್ರಬಲ ಅಭ್ಯರ್ಥಿ ಅಲ್ಲ ಎನ್ನುವುದು ಕಾಂಗ್ರೆಸ್ಸಿಗರಿಗೂ ಗೊತ್ತಿದೆ. ಹೀಗಾಗಿ ಹಾಲಿ ಸಚಿವ ಹೆಚ್ ಕೆ ಪಾಟೀಲರೇ ಅಖಾಡಕ್ಕೆ ಇಳಿಯುತ್ತಾರಾ ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ.




