Tuesday, March 3, 2026
27.3 C
Bengaluru
Google search engine
LIVE
ಮನೆರಾಜ್ಯಎಳ್ಳ ಅಮವಾಸ್ಯೆ ಆಚರಣೆ ಯಾಕೆ..?

ಎಳ್ಳ ಅಮವಾಸ್ಯೆ ಆಚರಣೆ ಯಾಕೆ..?

ಗದಗ : ಎಳ್ಳ ಅಮವಾಸ್ಯೆ ಬಂತು ಎಂದರೆ ಸಾಕು ರೈತರಿಗೆ ಎಲ್ಲಿಲ್ಲದ ಖುಷಿ. ವರ್ಷ ಪೂರ್ತಿ ಭೂಮಿ ತಾಯಿಯ ಮಡಿಲಲ್ಲಿ ಬೆವರು ಸುರಿಸಿ ದುಡಿದು, ವರ್ಷಕ್ಕೊಮ್ಮೆ ಅದೇ ಭೂತಾಯಿ ಒಡಲಿನಲ್ಲಿ ಸಹ ಕುಟುಂಬ ಪರಿವಾರ ಸಮೇತ ವೈವಿಧ್ಯಮಯ ಆಹಾರ ತಯಾರಿಸಿ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದರೇ ಸ್ವರ್ಗವೇ ಧರೆಗಿಳಿದು ಬಂದ ಅನುಭವ ಆಗುತ್ತದೆ.

ಎಳ್ಳ ಅಮವಾಸ್ಯೆ ಎನ್ನುವುದು ಯಾವುದೇ ಜನಾಂಗದ ಭೇದ ಭಾವವಿಲ್ಲದೇ, ಜಾತಿ ಭೇದವಿಲ್ಲದೇ ಆಚರಣೆ ಮಾಡುವ ಅನ್ನದಾತರ ಹಬ್ಬವಾಗಿದೆ. ಇನ್ನೂ ಮಹಿಳೆಯರು ತರ ತರಹದ ಹೋಳಿಗೆ, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಎಣ್ಣೆ ಹೋಳಿಗೆ , ಕರಿಗಡಬು, ಕರ್ಚಿಕಾಯಿ ಬಜ್ಜಿ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಅಗಸಿಪುಡಿ, ಶೆಂಗಾಪುಡಿ, ಪುಟಾಣಿ, ಗುರೆಳ್ಳುಗಳ ಚೆಟ್ನಿ ಹಾಗೂ ಕೆಂಪಿಂಡಿ ತಯಾರು ಮಾಡಿಕೊಂಡು ದೂರದ ಸಂಬಂಧಿಕರನ್ನು ಹಾಗೂ ಸ್ನೇಹಿತರನ್ನು ಕರೆಯಿಸಿ ಪ್ರತಿಯೊಬ್ಬರು ಹೊಸ ಬಟ್ಟೆಯನ್ನು ಉಟ್ಟು ಎತ್ತಿನ ಬಂಡಿ ಹೂಡಿಕೊಂಡು ಅದರಲ್ಲಿ ಎತ್ತುಗಳಿಗೆ ಜುಲಾ ಹಾಕಿ ಕೊರಳಲ್ಲಿ ಗೆಜ್ಜೆಸರ ಕಟ್ಟಿ ಕೊಂಬುಗಳಿಗೆ ಕೋಡಣಸು , ಹಣೆ ಕಟ್ಟು ಹಾಕಿ ಶೃಂಗಾರಿಸಿರುವುದು ವಿಶೇಷವಾಗಿರುತ್ತದೆ.

ಬಂಡಿಗೆ ತರ ತರಹದ ಬಣ್ಣ ಹಚ್ಚಿ ಅಲಂಕಾರ ಮಾಡಿಕೊಂಡು ಹೊಸ ಗುಡಾರ ಕಟ್ಟಕೊಂಡು ದೊಡ್ಡದಾದ ಬುತ್ತಿಗಂಟು ಇಟ್ಟುಕೊಂಡು, ಜಿಲ್ ಜಿಲ್ ಎಂದು ಹೋಗುವ ಆ ದೃಶ್ಯ ನೋಡಿದರೆ ಗ್ರಾಮೀಣ ಸೊಗಡು ಎತ್ತಿ ತೋರಿಸುತ್ತದೆ. ಈ ದೃಶ್ಯ ನೋಡಿದ್ರೆ ಯಾವುದೇ ವ್ಯಕ್ತಿಯಾಗಲಿ ಮನ ತುಂಬಿ ಖುಷಿಪಡುವುದಂತೂ ನೂರಕ್ಕೆ ನೂರು ಸತ್ಯ.

ಪ್ರತಿ ವರ್ಷವು ಎಳ್ಳು ಅಮಾವಾಸ್ಯೆಯ ದಿನ ಅನ್ನದಾತರ ಆರಾಧ್ಯೆ ದೇವತೆಯಾದ ಭೂತಾಯಿಗೆ ಶೀಮಂತ ಕಾರ್ಯ ಮಾಡುವುದು ಉತ್ತರ ಕರ್ನಾಟಕದ ರೈತರ ಪದ್ಧತಿಯಾಗಿದ್ದು, ಹಿಂದಿನ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಈ ಹಬ್ಬವನ್ನು ಅತೀ ಅದ್ದೂರಿಯಾಗಿ ಆಚರಣೆ ಮಾಡುತ್ತಾ ಬರುತ್ತಾರೆ. ಮುಂಗಾರು ಹೆಚ್ಚು ಮಳೆಗಾಲದಿಂದ ಕೂಡಿರುವುದರಿಂದ ಹಿಂಗಾರು ಮನಸೂನ್ ಮಾರುತಗಳು ಹಿಂದೆ ಸರಿದು ಮಾಗಿಯ ಚಳಿಗಾಲದಲ್ಲಿ ಈ ಎಳ್ಳ ಅಮಾವಾಸ್ಯೆ ಬರುತ್ತದೆ. ಪ್ರತಿಯೊಂದು ಹೊಲದಲ್ಲಿ ಭೂ ತಾಯಿ ಹಸಿರು ಮಡಿಯನ್ನುಟ್ಟು ಬಹು ಸುಂದರವಾಗಿ ಕಂಗೊಳಿಸುತ್ತಿರುತ್ತಾಳೆ. ಇಂತಹ ಸುಸಂದರ್ಭದಲ್ಲಿ ಪ್ರತಿಯೊಬ್ಬ ರೈತರು ತಮ್ಮ ತಮ್ಮ ಹೊಲದಲ್ಲಿರುವ ಬನ್ನಿ ಮಹಾಕಾಳಿಗೆ ಪೂಜೆ ಮಾಡಿ ಅದರೊಂದಿಗೆ ಐದು ಕಲ್ಲುಗಳನ್ನು ಇಟ್ಟು ಅವುಗಳನ್ನು ಪಂಚಪಾಂಡವರೆಂದು ಹಾಗೂ ಅದರ ಹಿಂದೆ ಒಂದು ಕಲ್ಲನ್ನು ಇಟ್ಟು ಅದನ್ನು ಮಹಾಕಳ್ಳಾ ಎಂದು ಹೇಳುತ್ತಾ, ಭಕ್ತಿ ಭಾವದಿಂದ ವಿಭೂತಿ, ಕುಂಕುಮ, ಭಂಡಾರ ಹಚ್ಚಿ ಮತ್ತು ಸುಣ್ಣದಿಂದ ಮರಕ್ಕೆ ಐದು ಸುತ್ತು ಗೆರೆ ಬಳಿದು ಪೂಜಿಸಿ ಎಲ್ಲಾ ತರಹದ ಹೋಳಿಗೆ ರೊಟ್ಟಿ, ಬದನೇಕಾಯಿಪಲ್ಲೆ, ಅನ್ನ ನೈವೇದ್ಯ ಹಿಡಿದು ಬೆಳೆದ ಬೆಳೆಗಳಿಗೆಲ್ಲಾ ಹೊಲದ ತುಂಬಾ “ಹುಲ್ಲಿಲಿಗೋ ಚೇಲಾಂಬ್ರಗೋ, ಎಂದು ಘೋಷಣೆ ಕೂಗುತ್ತಾ ಚರಗ ಚೆಲ್ಲುವರು”.

ತದನಂತರ ಭೂತಾಯಿಗೆ ನಮಸ್ಕರಿಸಿ ಇಂದಿನ ವರ್ಷ ಹೇಗಾದರೂ ಆಗಲಿ ಮುಂದಿನ ವರ್ಷ ಚೊಲೋ ಮಳೆ ಬೆಳೆ ಬರುವ ಹಾಗೆ ಮಾಡು ತಾಯಿ ಎಂದು ಬೇಡಿಕೊಳ್ಳುವರು. ಎಲ್ಲರೂ ಸೇರಿ ಖುಷಿಯಿಂದ ಸಾಮೂಹಿಕ ಭೋಜನ ಮಾಡುವುದು ಈ ಹಬ್ಬದ ವಿಶೇಷತೆ. ಈ ಸಮಯದಲ್ಲಿ ಯಾರಾದ್ರೂ ಹೊಲಕ್ಕೆ ಬಂದರೆ ಅವರಿಗೆ ಅಕ್ಕರೆಯಿಂದ ಊಟ ಬಡಿಸುವುದು ತಾಯಂದಿರರ ಖುಷಿ. ಹಿರಿಯರು ಹಾಗೂ ಮಹಿಳೆಯರು ಹೊಟ್ಟೆ ತುಂಬಾ ಭೋಜನ ಸ್ವೀಕರಿಸಿ, ಎಲೆ ಅಡಿಕೆ ಹಾಕಿಕೊಂಡು ಬೆಳೆಯಲ್ಲಾ ಅಡ್ಡಾಡಿ ನೋಡಿ ಮರದ ಕೆಳೆಗೆ ವಿಶ್ರಾಂತಿ ತಗೆದುಕೊಂಡರೆ, ಮಕ್ಕಳು ಮತ್ತು ಯುವಕರು ತಮ್ಮ ಹಾಗೂ ಅವರಿವರ ಹೊಲದಲ್ಲಿ ಬೆಳೆದ ಕಡಲೆ ಕಿತ್ತು ತಿನ್ನುತ್ತಾ ಮಜಾ ಮಾಡುವುದರ ಮೂಲಕ ಹೊಸ ವರ್ಷದ ಮೊದಲ ಹಬ್ಬ ಆಚರಣೆ ಮಾಡಲಾಗುತ್ತದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments