ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಕೇರಳ ಮೂಲದ ಚಿನ್ನದ ವ್ಯಾಪಾರಿ ಮೊಹಮ್ಮದ್ ಹಫೀಜ್ ಎಂಬುವರಿಗೆ ಸೇರಿದ 9 ಸ್ಥಳಗಳಲ್ಲಿ ಇ.ಡಿ. ದಾಳಿ ನಡೆಸಿದ್ದು, 1,672 ಗ್ರಾಂ ಚಿನ್ನ, 12 ಲಕ್ಷ ಮೌಲ್ಯದ 7 ಮೊಬೈಲ್, ಬ್ಯಾಂಕ್ ಅಕೌಂಟ್ನಲ್ಲಿದ್ದ 4.4 ಕೋಟಿ ರೂಗಳನ್ನು ಜಪ್ತಿ ಮಾಡಿದೆ. ಕೇರಳ, ಗೋವಾ, ಕರ್ನಾಟಕದಲ್ಲಿ 9 ಕಡೆ ಏಕಕಾಲದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣದ ತನಿಖೆ ಭಾಗವಾಗಿ ಚಿನ್ನದ ವ್ಯಾಪಾರಿ ಮೊಹಮ್ಮದ್ ಹಫೀಜ್ ಮನೆ, ಮಳಿಗೆಗಳ ಮೇಲೆ ಇ.ಡಿ. ದಾಳಿ ಮಾಡಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಪರಿಶೀಲನೆ ವೇಳೆ ಕಾರೊಂದರಲ್ಲಿ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಅವರ ಅಧಿಕೃತ ಪ್ರೊಟೊಕಾಲ್ ಸ್ಟಿಕ್ಕರ್ ಪತ್ತೆಯಾಗಿದೆ. ವಿಧಾನಸಭೆಯಿಂದ ಶಾಸಕರಿಗೆ ನೀಡಿರುವ ಸ್ಟಿಕ್ಕರ್ ಇದಾಗಿದೆ.
ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಹೆಸರಿನಲ್ಲಿ ಕಾರು ಖರೀದಿಸಿದ್ದು, ಅದನ್ನು ಎನ್ಎ ಹ್ಯಾರಿಸ್ ಅವರ ಆಪ್ತ ಸಂಬಂಧಿ ನಫೀಹಾ ಮೊಹಮದ್ ನಾಸಿರ್ ಹೆಸರಲ್ಲಿ ನೋಂದಣಿ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ. ದಾಳಿಗೊಳಗಾದ ಮೊಹಮ್ಮದ್ ಹಫೀಜ್, ನಲಪಾಡ್ ಆಪ್ತ ಸ್ನೇಹಿತ ಎಂದು ಹೇಳಲಾಗಿದೆ. ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಇಡಿ ತಿಳಿಸಿದೆ.
ಕಾಸರಗೋಡು ಮೂಲದ ಚಿನ್ನದ ವ್ಯಾಪಾರಿ ಮೊಹಮ್ಮದ್ ಹಫೀಜ್ ಹಾಗೂ ಆತನ ಸಹಚರರ ವಿರುದ್ಧ ವಂಚನೆ, ನಕಲಿ ದಾಖಲೆಗಳ ಸೃಷ್ಟಿ ಸೇರಿ ಹಲವು ಪ್ರಕರಣ ದಾಖಲಾಗಿವೆ. ಈ ಹಿಂದೆ ದುಬೈ ಮೂಲದ ಉದ್ಯಮಿಯೊಬ್ಬರು 108 ಕೋಟಿ ವರದಕ್ಷಿಣೆಯಾಗಿ ಪಡೆದು, ಮಗಳಿಗೆ ಹಿಂಸೆ ನೀಡಿದ್ದಾನೆ ಎಂದು ಹಫೀಜ್ ವಿರುದ್ಧ ಕೇರಳದ ಅಲುವಾದಲ್ಲಿ ದೂರು ನೀಡಿದ್ದರು.