ಧಾರವಾಡ: 2014ರ ನಂತರ ನಮ್ಮ ದೇಶದಲ್ಲಿ ಶೇ.75 ರಷ್ಟು ಭಯೋತ್ಪಾದನೆ ಕಡಿಮೆಯಾಗಿದೆ. ನಕ್ಸಲಿಸಂ ಕೂಡ ಶೇ.75 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಈ ಹಿಂದೆ ದೇಶದ ಬೇರೆ ಬೇರೆ ಜಾಗದಲ್ಲಿ ಬಾಂಬ್ ಸ್ಪೋಟ ಆಗುತ್ತಿದ್ದವು. ಈಗ ಅವ್ಯಾವ ಘಟನೆಗಳು ನಡೆದಿಲ್ಲ. ಗಡಿಯಲ್ಲಿ ಅಂಗಡಿ ವ್ಯಾಪಾರಿಯೊಬ್ಬನಿಗೆ ಹೊಡೆದದ್ದನ್ನು ಬಿಟ್ಟರೆ ಭಯೋತ್ಪಾದಕ ಘಟನೆಗಳು ಕಡಿಮೆಯಾಗಿವೆ. ಮೋದಿ ಸರ್ಕಾರದ ಸಂಕಲ್ಪವೇ ಶೂನ್ಯ ಭಯೋತ್ಪಾದನೆ. ಇದನ್ನು ಅನುಸರಿಸಿದ ಪರಿಣಾಮ ಇವತ್ತು ದೇಶ ಸುರಕ್ಷಿತವಾಗಿದೆ. ಯಾವ ದೇಶ ಸುರಕ್ಷಿತವಾಗಿರುತ್ತದೆಯೋ ಆ ದೇಶ ಸಮೃದ್ಧಿ ಹೊಂದಿ ನೆಮ್ಮದಿಯಿಂದ ಇರುತ್ತದೆ ಎಂದರು.
ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಬಿಜೆಪಿ ದೇಶ ಒಡೆದ ಪಕ್ಷ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಜೋಶಿ, ಮೊಯ್ಲಿ ಅವರಿಗೆ ಇತಿಹಾಸ ಗೊತ್ತಿಲ್ಲ. ಅವರು ಸೋಲಿನ ಹತಾಶೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ. ನಾಲ್ಕು ರಾಜ್ಯದಲ್ಲಿ ಅವರು ಸೋತರು. ಎಲ್ಲ ಕಾರಣದಿಂದ ಅಪ್ರಬುದ್ಧರಾಗಿ ಮಾತನಾಡುತ್ತಿದ್ದಾರೆ. ಮೊಯ್ಲಿ ಅವರು ಪುಸ್ತಕ ಬರೆಯುವವರು, ಅಂತವರು ಈ ರೀತಿ ಹೇಳಿಕೆ ನೀಡಿದ್ದು ಆಶ್ಚರ್ಯ. ಅವರು ಇನ್ನಷ್ಟು ಓದಿಕೊಳ್ಳಬೇಕು. ಹಿಂದೂ ಮಹಾಸಭಾ ಆ ವೇಳೆ ಪಾಕಿಸ್ತಾನ ಮಾಡುವುದಾದರೆ ಜನಸಂಖ್ಯೆ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಆಗಬೇಕು ಎಂದಿದ್ದು ನನಗೆ ಗೊತ್ತಿದೆ. ಅದು ಬಿಟ್ಟರೆ ಹಿಂದೂ ಮಹಾಸಭಾ ಕೂಡ ದೇಶ ವಿಭಜನೆ ಮಾತು ಹೇಳಿಲ್ಲ. ಇದು ಮೊಯ್ಲಿ ಅವರ ತಪ್ಪು ಕಲ್ಪನೆ ಎಂದರು.
ಯುಎಇಯಲ್ಲಿ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯುಎಇಯಲ್ಲಿ ಮಂದಿರ ನಿರ್ಮಾಣ ಆಗಿದ್ದು ನಮ್ಮ ದೇಶದ ಹಾಗೂ ನಮ್ಮ ಸಂಸ್ಕೃತಿಯ ಮಹತ್ವ ತೋರಿಸುತ್ತದೆ. ಯುಎಇಯಲ್ಲಿ ದೇವಾಲಯ ಆಗುತ್ತದೆ ಎಂದರೆ ಪ್ರಧಾನಿ ಹೇಳಿದ್ದಕ್ಕೆ ಅಲ್ಲಿಯ ರಾಜ ಒಪ್ಪಿ ಜಾಗ ಕೊಟ್ಟರು. ಆರಾಧನೆಗೆ ಅವಕಾಶ ಕೊಟ್ಟರು. ಪಿಯುಷ್ ಗೋಯಲ್ ಅವರು ಇತ್ತೀಚೆಗೆ ಅಲ್ಲಿನ ರಾಜರನ್ನು ಭೇಟಿ ಮಾಡಿದ್ದರು. ಮೋದಿ ಏನು ಹೇಳುತ್ತಾರೋ ಅದನ್ನು ನಾನು ಮಾಡುತ್ತೇನೆ ಎಂದು ಅಲ್ಲಿನ ರಾಜರು ಹೇಳಿದ್ದರು ಎಂದರು.