ಧಾರವಾಢ ; ಸರ್ಕಾರದ ಬಳಿ ಅಭಿವೃದ್ಧಿಗೆ ಹಣವಿದೆ ಎಂಬುದಕ್ಕೆ ಈ ಶಂಕುಸ್ಥಾಪನೆ ಸಾಕ್ಷಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

ಧಾರವಾಡ ಜಿಲ್ಲೆಯ ನವಲಗುಂದದ ಮಾಡಲ್ ಹೈಸ್ಕೂಲ್ನಲ್ಲಿ ನಡೆದ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಗ್ಯಾರಂಟಿ ಸಮಾವೇಶ ಉದ್ಘಾಟಿಸಿ ಸಿದ್ದರಾಮಯ್ಯ ಅವರು, ಫಲಾನುಭವಿಗಳಿಗೆ ಆಶ್ರಯ ಯೋಜನೆ ಮನೆಗಳ ಹಕ್ಕು ಪತ್ರ ವಿತರಣೆ ಮಾಡಿದರು.

ನವಲಗುಂದ ವಿಧಾನಸಭಾ ಕ್ಷೇತ್ರದ ಅನೇಕ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇವೆ. ಗ್ಯಾರಂಟಿ ಜಾರಿ ಮಾಡಿರುವ ಕಾರಣಕ್ಕೆ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಹಣ ಇರದ ಕಾರಣ ಅಭಿವೃದ್ಧಿ ಮಾಡುತ್ತಿಲ್ಲ ಎನ್ನುತ್ತಿದ್ದಾರೆ. ಇವತ್ತು ನಿಮ್ಮ ಕಣ್ಮುಂದೆ ಕೋಟ್ಯಾಂತರ ರೂಪಾಯಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದೇವೆ. ಅಭಿವೃದ್ಧಿ ಕೆಲಸ ಆಗುತ್ತಿವೆ ಅನ್ನೊದಕ್ಕೆ ಈ ಕಲ್ಲುಗಳೇ ಸಾಕ್ಷಿ ಎಂದರು.
ಕೇವಲ ರಾಜಕೀಯಕ್ಕೆ ಬಿಜೆಪಿ ಆರೋಪ ಮಾಡುತ್ತಿದೆ. ಆರೋಪದಲ್ಲಿ ಸತ್ಯ ಇಲ್ಲ, ಹುರುಳಿಲ್ಲ ಎಂದು ನಾನು ಸ್ಪಷ್ಟ ಪಡಿಸುತ್ತಿದ್ದೇನೆ ಎಂದು ಹೇಳಿದ ಸಿದ್ದರಾಮಯ್ಯ 1385 ಫಲಾನುಭವಿಗಳಿಗೆ ವಸತಿ ಹಕ್ಕು ಪತ್ರ ನೀಡಿದ್ದೇವೆ. ಇದು ಅಭಿವೃದ್ದಿ ಹೌದೋ ಅಲ್ವೋ ನೀವೇ ತೀರ್ಮಾನ ಮಾಡಿ ಎಂದರು.


