ನವದೆಹಲಿ: ಸುಪ್ರೀಂ ಕೋರ್ಟ್ ಚಾಟಿ ಬಳಿಕ ಎಚ್ಚೆತ್ತುಕೊಂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತೀಯ ಚುನಾವಣಾ ಆಯೋಗಕ್ಕೆ ಎಲ್ಲಾ ಚುನಾವಣಾ ಬಾಂಡ್‌ಗಳ ಡೇಟಾವನ್ನು ಸಲ್ಲಿಸಿದೆ. ಭಾರತೀಯ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಮಾರ್ಚ್ 15 ರಂದು ಸಾರ್ವಜನಿಕರಿಗಾಗಿ ಎಲ್ಲಾ ಡೇಟಾವನ್ನು ಅಪ್‌ಲೋಡ್ ಮಾಡುತ್ತದೆ. ಇದುವರೆಗೆ ಮುಚ್ಚಿದ ಕವರ್‌ಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಚುನಾವಣಾ ಆಯೋಗ ಸಾರ್ವಜನಿಕಗೊಳಿಸುತ್ತದೆ.
ರಾಜಕೀಯ ಪಕ್ಷಗಳ ಚುನಾವಣಾ ಬಾಂಡ್‌ಗಳ ವಿವರಗಳನ್ನು ಸಲ್ಲಿಸಲು ಜೂನ್ 30 ರವರೆಗೆ ಕಾಲಾವಕಾಶ ಬೇಕೆಂದು ಎಸ್ಬಿಐ ಮನವಿ ಮಾಡಿತ್ತು. ಇದಕ್ಕೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಪೀಠವು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಮಾರ್ಚ್ 12ರೊಳಗೆ ಎಲ್ಲಾ ಮಾಹಿತಿಯನ್ನು ಸಲ್ಲಿಸುವಂತೆ ನಿನ್ನೆ ಕೋರ್ಟ್ ತಾಕೀತು ಮಾಡಿತ್ತು. ಈ ಹಿನ್ನೆಲೆ ಇಂದು ಎಸ್ಬಿಐ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಿದೆ..