ದೆಹಲಿ: ಸಂಸತ್ ಅಧಿವೇಶನದಲ್ಲಿ ವಾದ, ವಿವಾದ, ಆಕ್ರೋಶ, ಆರೋಪ, ಚರ್ಚೆ, ಗಲಾಟೆಯ ಜತೆಗೆ ಕೆಲವೊಮ್ಮೆ ನವಿರಾದ ಹಾಸ್ಯ, ಚಟಾಕಿ, ಜೋಕ್, ಕಾಲೆಳೆಯುವಿಕೆ, ರಾಜಕಾರಣಿಗಳ ಮಧ್ಯೆ ಇರುವ ಅವಿನಾಭಾವ ಸಂಬಂಧವೂ ಅನಾವರಣಗೊಳ್ಳುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಎಚ್.ಡಿ.ದೇವೇಗೌಡರ ಕುರಿತು ಸಿಡಿಸಿದ ಹಾಸ್ಯ ಚಟಾಕಿಗೆಗೆ ಇಡೀ ಕಲಾಪ ನಗೆಗಡಲಲ್ಲಿ ಮುಳುಗಿದೆ. “91ನೇ ವಯಸ್ಸಿನಲ್ಲಿ ದೇವೇಗೌಡರಿಗೆ ಬಿಜೆಪಿ, ಮೋದಿ ಸಹವಾಸ ಬೇಕಿತ್ತಾ” ಎಂದು ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಕೇಳಿದ್ದಾರೆ.
ದೇವೇಗೌಡರು ಜೀವನಪೂರ್ತಿ ರೈತ ಪ್ರತಿಭಟನೆ, ಸಮಾಜವಾದ, ಜಾತ್ಯತೀತವಾದವನ್ನು ಪ್ರತಿಪಾದಿಸಿದರು. ಆದರೆ, ದೇವೇಗೌಡರು 91ನೇ ವಯಸ್ಸಿನಲ್ಲಿ ಹೋಗಿ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಜತೆ ಮೈತ್ರಿ ಮಾಡಿಕೊಂಡರು. ಅದರಲ್ಲೂ, ನರೇಂದ್ರ ಮೋದಿ ಅವರನ್ನು ಎಚ್.ಡಿ.ದೇವೇಗೌಡರು ತಬ್ಬಿಕೊಂಡರು. ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದರು. ನಾನು, 20-30 ವರ್ಷದವನಾಗಿದ್ದಾಗಿನಿಂದ ನೋಡುತ್ತಿದ್ದೇನೆ. ಇವರು ಯಾರನ್ನೂ ಹೊಗಳಿದವರಲ್ಲ. ಈಗ ಅವರು ಏಕಾಏಕಿ ಮೋದಿ ಅವರನ್ನು ಹೊಗಳಿದ್ದು ನನಗೆ ಅಚ್ಚರಿ ಮೂಡಿಸಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳುತ್ತಲೇ ಪ್ರಧಾನಿ ನರೇಂದ್ರ ಮೋದಿ, ಎಚ್.ಡಿ.ದೇವೇಗೌಡ ಸೇರಿ ಎಲ್ಲರೂ ಮನಸಾರೆ ನಕ್ಕರು.
ಬೇರೆಯವರ ಬಗ್ಗೆ ದೇವೇಗೌಡರು ಹೊಗಳುವುದು ತುಂಬ ಕಡಿಮೆ. ಅವರಿಗೆ ಅಂತಹ ಅಭ್ಯಾಸವೇ ಇಲ್ಲ. ಈ ಅಭ್ಯಾಸವು ಬದಲಾವಣೆಯಾಗಿದ್ದೇ ನನಗೆ ಅಚ್ಚರಿ ಮೂಡಿಸಿದೆ. ನನ್ನನ್ನು ಪ್ರೀತಿಸಿದ, ಆತ್ಮೀಯತೆಯಿಂದ ಕಂಡ ಏಕೈಕ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಮಾತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಪ್ರೀತಿ, ಸಂಬಂಧ ಮೊದಲೇ ಇದ್ದರೆ ಚೆನ್ನಾಗಿತ್ತು. ಈಗ 91ನೇ ವಯಸ್ಸಿನಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಏನು ಪ್ರಯೋಜನ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.