ಲೋಕಸಭೆ ಚುನಾವಣೆಗೆ ಸಿದ್ಧತೆ ಶುರುವಾಗಿದೆ. ಅಖಾಡಕ್ಕಿಳಿಬೇಕಾದ ಕಲಿಗಳು ಯಾರು ಅನ್ನೋ ನಿಟ್ಟಿನಲ್ಲಿ ಆಯ್ಕೆ ಪ್ರಕ್ರಿಯೆ ನಡೀತಿವೆ. ಕರ್ನಾಟಕದಲ್ಲೂ ಹುರಿಯಾಳುಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿದೆ. ದೆಹಲಿಯಲ್ಲಿ ಕಾಂಗ್ರೆಸ್, ಬಿಜೆಪಿ ಮೀಟಿಂಗ್ ಮಂತ್ರ ಜಪಿಸ್ತಿವೆ. ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳು ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದೆ. ಹೀಗಾಗಿ ಅಳೆದೂ ತೂಗಿ ಅಭ್ಯರ್ಥಿಗಳನ್ನ ಅಖಾಡಕ್ಕಿಳಿಸಲು ದೆಹಲಿ ಅಂಗಳದಲ್ಲಿ ಕಸರತ್ತು ಮಾಡ್ತಿವೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಈ ಬಾರಿ 20 ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಪ್ರತಿಷ್ಠೆಯಾಗಿಯೂ ಪರಿಗಣಿಸಿದೆ. ಹೀಗಾಗಿ ಅಳೆದುತೂಗಿ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲು ಮುಂದಾಗಿದೆ. ಈ ಸಂಬಂಧ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಕುರಿತು ಚರ್ಚೆ ನಡೆಸಲಿದ್ದಾರೆ. ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರಿಂದ ಹೈಕಮಾಂಡ್ಗೆ ಪಟ್ಟಿ ಕಳಿಸಲಾಗಿದೆ. ಇದು ದೆಹಲಿಯಲ್ಲಿ ಚರ್ಚೆಯಾಗಿ ಎರಡ್ಮೂರು ದಿನದಲ್ಲಿ ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗೋ ಸಾಧ್ಯತೆ ಇದೆ.
ಇನ್ನೂ. ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಇದರಿಂದ ಕ್ಷೇತ್ರ ಹಂಚಿಕೆ ಗೊಂದಲ ಇರೋ ಕಾರಣಕ್ಕೆ ಮೊದಲ ಪಟ್ಟಿಯಲ್ಲಿ ರಾಜ್ಯದ ಅಭ್ಯರ್ಥಿಗಳ ಟಿಕೆಟ್ ಪ್ರಕಟಿಸರಲಿಲ್ಲ. ಇದೀಗ ದೆಹಲಿಯಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆದಿದ್ದು, ಅಭ್ಯರ್ಥಿಗಳ ಫೈನಲ್, ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗಿದೆ. ಒಟ್ಟಾರೆ ಲೋಕಸಭೆ ಚುನಾವಣೆಗೆ ದಿನಗಳು ಹತ್ತಿರವಾಗ್ತಿದ್ದಂತೆ, ರಾಜ್ಯದಲ್ಲಿ ರಣಾಂಗಣ ರಂಗೇರುತ್ತಿದೆ. ಯಾವ ಪಕ್ಷಗಳು ಯಾರಿಗೆ ಮಣೆ ಹಾಕುತ್ವೆ? ಯಾರು ಎದುರಾಳಿ ಆಗ್ತಾರೆ? ಅನ್ನೋದರ ಮೇಲೆ ಕದನದ ಕಾವು ಗೊತ್ತಾಗಲಿದೆ.