ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಮನಗರದಲ್ಲಿ ಬಹಿರಂಗವಾಗಿ ಹೇಳಿದ ಸುಳ್ಳನ್ನು ಕೇಳಿ ಶಾಕ್ ಆದ ಸಿದ್ದರಾಮಯ್ಯ ಅವರು, ಇಂಥಾ ಸುಳ್ಳನ್ನಾ ಹೇಳೋದು ಎಂದು ಮೈಸೂರು ಸಭೆಯಲ್ಲಿ ಆಶ್ಚರ್ಯ ವ್ಯಕ್ತಪಡಿಸಿದರು. ಅಮಿತ್ ಶಾ ಅವರು ಸುಳ್ಳು ಹೇಳೋದು ನನಗೇನೂ ಆಶ್ಚರ್ಯ ಆಗಿಲ್ಲ. ಆದರೆ ಇಂಥಾ ಸುಳ್ಳಾ ಹೇಳೋದು ಎಂದು ಮೈಸೂರಿನಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಅಮಿತ್ ಶಾ ಅವರನ್ನು ಲೇವಡಿ ಮಾಡಿದರು.
ರಾಜ್ಯದಲ್ಲಿ ಬರ ಘೋಷಣೆ ಆದ ಬಳಿಕ ನಾವು ಸೆಪ್ಟೆಂಬರ್ 23ರಂದೇ ಕೇಂದ್ರಕ್ಕೆ ಮೊದಲ ಮನವಿ ಮಾಡಿದ್ದೇವೆ. ಅಕ್ಟೋಬರ್ ನಲ್ಲಿ ಕೇಂದ್ರ ತಂಡ ರಾಜ್ಯ ಪ್ರವಾಸ ಮಾಡಿ ಬರ ಕುರಿತಂತೆ ವರದಿ ನೀಡಿದೆ. ಆದರೂ ಅವತ್ತಿಂದ , ಇವತ್ತಿನವರೆಗೂ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಬರ ಪರಿಹಾರದ ಒಂದೇ ಒಂದು ರೂಪಾಯಿಯನ್ನೂ ಕೊಡಲಿಲ್ಲ. ಈಗ ಬಂದು ಎಂಥಾ ಸುಳ್ಳು ಭಾಷಣ ಮಾಡಿದ್ದಾರೆ ನೋಡಿ ಎಂದರು.
ಮೋದಿ ಮತ್ತು ಅಮಿತ್ ಶಾ ಜೋಡಿ ಪ್ರವಾಹ ಬಂದಾಗ ಬರಲಿಲ್ಲ, ಬರಗಾಲ ಬಂದರೂ ಬರಲಿಲ್ಲ. ರಾಜ್ಯಕ್ಕೆ ಸಮಸ್ಯೆ ಆದಾಗಲೆಲ್ಲಾ ರಾಜ್ಯಕ್ಕೆ ತಲೆ ಹಾಕದವರು ಚುನಾವಣೆ ಬಂದಾಗ ಮಾತ್ರ ಓಡೋಡಿ ಬಂದಿದ್ದಾರೆ. ಯಾವ ಮುಖ ಹೊತ್ತು ಮೋದಿ, ಅಮಿತ್ ಶಾ ರಾಜ್ಯದಲ್ಲಿ ಮೆರವಣಿಗೆ ಮಾಡ್ತಾರೆ ? ರಾಜ್ಯದ ಜನರಿಗೆ ಇಷ್ಟು ದೊಡ್ಡ ಮಟ್ಟದ ದ್ರೋಹ ಎಸಗಿದ ಇವರನ್ನು ಕರೆಸಿ ಮೆರವಣಿಗೆ ಮಾಡ್ತಾರಲ್ಲಾ , ಬಿಜೆಪಿ-ಜೆಡಿಎಸ್ ನವರಿಗೆ ಮರ್ಯಾದೆ ಇಲ್ವಾ ಎಂದು ಪ್ರಶ್ನಿಸಿದರು.