ಚಿತ್ರದುರ್ಗ: ಸರ್ಕಾರ ಹಾಗೂ ಸಮಾಜಕ್ಕೂ ಮಾರ್ಗದರ್ಶನ ನೀಡುವ ಆಧ್ಯಾತ್ಮಕ ನಾಯಕತ್ವ ಸಿರಿಗೆರೆ ಶ್ರೀಮಠಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯಲ್ಲಿ ಜರುಗಿದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರೀಗಳು ಭಕ್ತರ ಭಾವನೆಗಳಿಗೆ ಸ್ಪಂದಿಸುವ ಪೂಜ್ಯರು, ಭಕ್ತರ ಸಂಕಷ್ಟಕ್ಕೆ ನೆರವಾಗಲು ನೀರಾವರಿ ಯೋಜನೆಗಳನ್ನು ಜಾರಿಗೆ ತಂದ ಚೈತನ್ಯಪುರುಷರು. ಬರಗಾಲ ನಿಮಿತ್ತ ತರಳಬಾಳು ಹುಣ್ಣಿಮೆಯನ್ನು ಸಿರಿಗೆರೆಯಲ್ಲಿಯೇ ಆಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ-ಬೆಳೆಯಾಗಿ ಉತ್ತಮ ಬೆಲೆ ಸಿಕ್ಕು ರೈತರ ಜೀವನ ಸಂತೃಷ್ಟವಾಗಲಿ ಎಂದು ಹೇಳಿದರು.
ಮರುಳಸಿದ್ಧರ ವಿಚಾರಗಳು ಬದುಕಿಗೆ ಹತ್ತಿರ. ಭಕ್ತರ ಬದುಕು ಸ್ವಾಭಿಮಾನದ ಬದುಕು, ಸಮಾನತೆಯ ಬದುಕು ಇಟ್ಟುಕೊಂಡು ಕ್ರಾಂತಿಯನ್ನು ಮಾಡಿದವರು ಲಿಂಗೈಕ್ಯ ಶ್ರೀಗಳವರು. ಅವರು ಜ್ಞಾನಿಗಳೂ ಹೌದು, ವಿಜ್ಞಾನಿಗಳೂ ಹೌದು. ಜ್ಞಾನದ ಮೂಲಕ ಸಮಾಜದಲ್ಲಿ ಸಮಾನತೆ ತರುವ ಆದರ್ಶ ಪುರುಷರು ಎಂದು ಹೇಳಿದರು.
ಬಿಜೆಪಿ ರಾಜ್ಯಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಮಾತನಾಡಿ, ಲಿಂಗೈಕ್ಯ ಶ್ರೀಗಳವರು ಕಂದಾಚಾರ, ವಾಮಾಚಾರ ಮೆಟ್ಟಿನಿಂತವರು. ನಾಡಿಗೆ ಅನ್ನದಾಸೋಹ, ಜ್ಞಾನದಾಸೋಹ ಉಣಬಡಿಸಿದವರು. ಪ್ರಸ್ತುತ ಶ್ರೀಗಳವರು ರೈತರ ಪರ ಕಾಳಜಿ ಇಟ್ಟು ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿ ಆಧುನಿಕ ಭಗೀರಥರಾಗಿದ್ದಾರೆ. ಗಡಿ ಕಾಯುವ ಯೋಧ ಈ ದೇಶದ ಒಂದು ಕಣ್ಣಾದರೆ ರೈತ ಈ ದೇಶದ ಇನ್ನೊಂದು ಕಣ್ಣಾಗಿದ್ದಾರೆ. ಶ್ರೀಗಳವರು ತಂತ್ರಜ್ಞಾನದ ಸಹಾಯದಿಂದ ವಚನ ಸಾಹಿತ್ಯವನ್ನು ಪ್ರಪಂಚದಾದ್ಯಂತ ಪಸರಿಸುವುಂತೆ ಮಾಡಿದ್ದಾರೆ ಎಂದು ಹೇಳಿದರು.
ಸದ್ಧರ್ಮ ಸಿಂಹಾಸನಾರೋಹಣ ನೆರವೇರಿಸಿ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಹಿರೇಮಗಳೂರು ಕಣ್ಣನ್ ಗುರು ಮಹಿಮೆಯ ಹಾಗೂ ಮೈಸೂರು ವಿಶ್ರಾಂತ ಉಪಕುಲಪತಿಗಳಾದ ಡಾ. ಕೆ.ಚಿದಾನಂದಗೌಡ ಕುವೆಂಪು ಮತ್ತು ವಿಶ್ವಮಾನವ ಸಂದೇಶದ ಬಗ್ಗೆ ವಿಷಯ ಮಂಡಿಸಿದರು.