ಚಿತ್ರದುರ್ಗ : ಚಿತ್ರದುರ್ಗ ಸಮೀಪದ ಬಹದ್ದೂರ್ ಘಟ್ಟ ಬಳಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮುಂಜಾನೆ ಗುಂಡಿಗೆ ಉರುಳಿದೆ.
ಎಚ್ ಪಿ ಸಿಲೆಂಡರ್ ಗಳನ್ನು ಜಗಳೂರು ತಾಲೂಕಿನ ಹುಲ್ಲಿಕಟ್ಟೆ ಗ್ರಾಮಕ್ಕೆ ಯಡಿಯೂರಿನಿಂದ 342 ಸಿಲಿಂಡರ್ ಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿದೆ. ಚಾಲಕನ ಕೈಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಿಪಟೂರು ಟೌನ್ ಮೂಲದ ರುದ್ರೇಶ್ ಎಂಬುದು ತಿಳಿದು ಬಂದಿದೆ.
ಬಿಳಿಚೋಡು ರಸ್ತೆ ಕಡೆ ತೆರಳುವ ಸೇತುವೆ ಬಳಿ ಕ್ರಾಸ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಿದೆ. ಕ್ರಾಸ್ ಬಳಿಯೇ ಇದ್ದ 100 ಕೆ.ವಿ. ಸಾಮಥ್ಯ ೯ದ ಟ್ರಾನ್ಸ್ ಫಾರ್ಮರ್ ಬಳಿ ಘಟನೆ ನಡೆದಿದ್ದು, ಆಗಬಹುದಾದ ದೊಡ್ಡ ಅನಾಹುತ ತಪ್ಪಿದೆ.
ಲಾರಿ ಪಲ್ಟಿಯಾದ ರಭಸಕ್ಕೆ ಲಾರಿ ಡಿಸೇಲ್ ಟ್ಯಾಂಕ್ ಸೋರಿಕೆ ಆಗುತ್ತಿದೆ. ಸ್ಥಳಕ್ಕೆ ಆಗಮಿಸಿರುವ ಸ್ಥಳೀಯ ಪೊಲೀಸರು ಜನರನ್ನು ಹತ್ತಿರಕ್ಕೆ ಬಾರದಂತೆ ಕ್ರಮ ಕೈಗೊಂಡಿದ್ದಾರೆ. ಚಿತ್ರದುರ್ಗ ಅಗ್ನಿ ಶಾಮಕ ಠಾಣೆ ಅಧಿಕಾರಿಗಳು ಮತ್ತು ಪೈರ್ ಎಂಜಿನ್ ಸ್ಥಳದಲ್ಲೇ ಮೊಕ್ಕಂ ಇದ್ದು ಲಾರಿ ಬೆಂಕಿ ಕೆನ್ನಾಲಿಗೆಗೆ ಒಳಗಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಇಲ್ಲಿನ ರಸ್ತೆ ಸೇತುವೆ ಕಿರಿದಾಗಿದ್ದು ಈ ಹಿಂದೆ ಹಲವಾರು ಅಪಘಾತ ಗಳು ಸಂಭವಿಸಿವೆ. ಸರ್ಕಾರ ಕೂಡಲೇ ರಸ್ತೆ ಸೇತುವೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬಹದ್ದೂರ್ ಘಟ್ಟ ಗ್ರಾಮಸ್ಥರು ಆಗ್ರಹಿಸಿದ್ದಾರೆ.