ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಪೈಪೋಟಿಗೆ ಕೊನೆಗೂ ತೆರೆ ಬಿದ್ದಿದೆ. ಹಲವು ಊಹಾಪೋಹಗಳ ನಡುವೆ ಕೇಳಿ ಬಂದಿದ್ದ ಕೆಲವು ಹೆಸರುಗಳಿಗೆ ತಿಲಾಂಜಲಿ ಇಟ್ಟು, ರಾಮಲಿಂಗಪ್ಪರನ್ನು ಮರು ಆಯ್ಕೆ ಮಾಡಲಾಗಿದೆ. ಕೊನೆ ಗಳಿಗೆಯವರೆಗೂ ಕುತೂಹಲ ಉಳಿಸಿಕೊಂಡಿದ್ದ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಕೊನೆಗೆ ತೆರೆ ಎಳೆಯಲಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಗಾದಿಗೆ ಮತ್ತೊಮ್ಮೆ ರಾಮಲಿಂಗಪ್ಪರನ್ನೇ ಆಯ್ಕೆ ಮಾಡಲಾಗಿದೆ. ಇವರ ಆಯ್ಕಗೂ ಮುನ್ನಾ ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾಧ್ಯಕ್ಷ ಆಯ್ಕೆ ವಿಚಾರಕ್ಕೆ ಹಲವು ಪ್ರಮುಖರಿಂದ ಶಿಫಾರಸ್ಸುಗಳು ನಡೆದುಹೋಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಇಬ್ಬರ ಹೆಸರು ಮಂಚೂಣಿಯಲ್ಲಿತ್ತು ಅಧ್ಯಕ್ಷರ ಆಯ್ಕೆ ಪಟ್ಟಿಯಲ್ಲಿ ಮಂಚೂಣಿಯಲ್ಲಿತ್ತು. ಈ ಪೈಕಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ರಾಮಚಂದ್ರಗೌಡ ಹಾಗೂ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಗೋಪಿನಾಥ್ ಹೆಸರುಗಳು ಕೇಳಿ ಬಂದಿತ್ತು.ಅಂತಿಮವಾಗಿ ಇವರಿಬ್ಬರನ್ನೂ ಪಕ್ಕಕ್ಕಿಟ್ಟಿರುವ ಪಕ್ಷ ರಾಮಲಿಂಗಪ್ಪ ರನ್ನೆ ಮತ್ತೆ ಮರು ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ ಎರಡನೇ ಬಾರಿಗೆ ಬಾಗೇಪಲ್ಲಿ ಮೂಲದ ರಾಮಲಿಂಗಪ್ಪಗೆ ಜಿಲ್ಲಾಧ್ಯಕ್ಷ ಪಟ್ಟ ಒಲಿದಿದೆ. ಮಾಜಿ ಸಚಿವ ಡಾ.ಕೆ ಸುಧಾಕರ್ ಆಪ್ತನಾಗಿ ಗುರುತಿಸಿಕೊಂಡಿರುವ ರಾಮಲಿಂಗಪ್ಪ ಆಯ್ಕೆಗೆ ಈಗಾಗಲೆ ಜಿಲ್ಲೆಯಲ್ಲಿ ಒಳಬೇಗುದಿ ಶುರುವಾಗಿದ್ದು ಲೋಕಾ ಚುನಾವಣೆಗೆ ಇದು ದೊಡ್ಡ ಪೆಟ್ಟು ಕೊಡಲಿದೆ.