ಚಾಮರಾಜನಗರ: ಕಾಪಿ ಒಡೆಯುವುದು ಮಹಾ ಅಪರಾಧವೇ? ಎಂದು ಮಾಜಿ ಶಿಕ್ಷಣ ಸಚಿವ ಎನ್ ಮಹೇಶ್ ಪ್ರಶ್ನೆ ಮಾಡಿದ್ದಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಮಾತನಾಡಿದ ಅವರು, SSLC ಪರೀಕ್ಷೆ ಆರಂಭವಾಗಿದೆ, ಶಿಕ್ಷಣ ಇಲಾಖೆ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದೆ. 15-16 ವರ್ಷದ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಮಕ್ಕಳಲ್ಲಿ ಮೊದಲೇ ಪರೀಕ್ಷೆಯ ಭಯ ಇರುತ್ತದೆ. ಹೀಗಿರುವಾಗ ಸಿಸಿ ಕ್ಯಾಮರಾ ಅಳವಡಿಸಿ ಮತ್ತಷ್ಟು ಭಯ ಪಡಿಸುತ್ತಿದ್ದಾರೆ. ಹಾಗಾದರೆ ಪರೀಕ್ಷೆ ಬರೆಯುತ್ತಿರುವ ಮಕ್ಕಳು ಕಳ್ಳರಾ? ಎಂದು ಪ್ರಶ್ನೆ ಮಾಡಿದರು. ಇಂತಹ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿದೆ ಎಂದು ಎನ್.ಮಹೇಶ್ ವಿಷಾದ ವ್ಯಕ್ತಪಡಿಸಿದರು.
ಮಕ್ಕಳು ಕಾಪಿ ಒಡೆಯುತ್ತಾರೆ ಎಂದು ಸಿಸಿ ಕ್ಯಾಮರಾ ಹಾಕಿದ್ದಾರೆ. ಹಾಗಾದರೆ ಕಾಪಿ ಒಡೆಯುವುದು ಮಹಾ ಅಪರಾಧವೇ? ಒಂದು ವೇಳೆ ನಾನು ಇನ್ನೊಂದು ವರ್ಷ ಶಿಕ್ಷಣ ಸಚಿವನಾಗಿ ಮುಂದುವರೆದಿದ್ದರೆ, ಪಠ್ಯ ಪುಸ್ತಕ ನೋಡಿ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ತರುತ್ತಿದ್ದೆ. ಆ ಮೂಲಕ ಮಕ್ಕಳಿಗೆ ಪಠ್ಯ ಪುಸ್ತಕದಲ್ಲಿ ಉತ್ತರ ಹುಡುಕುವ ಚಾಕಚಕ್ಯತೆ ಬೆಳೆಯುತ್ತಿತ್ತು ಎಂದು ಬಿಜೆಪಿ ಉಪಾಧ್ಯಕ್ಷ, ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಕಾಪಿ ಮಾಡುವ ಬಗೆಗಿನ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.


