ಚಾಮರಾಜನಗರ: ಕುಖ್ಯಾತ ಕಾಡುಗಳ್ಳ, ದಂತಚೋರ, ನರಹಂತಕ ವೀರಪ್ಪನ್ ಪುತ್ರಿ ಕಾನೂನು ಪದವಿ ಪಡೆದು ಈಗ ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಉಪಾಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.
ಈ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ ಪರಿವಾರದ “ವನವಾಸಿ ಕಲ್ಯಾಣ್ ಆಶ್ರಮ“ದ ಸಹಕಾರ ಸಂಸ್ಕಾರಯುತ ಶಿಕ್ಷಣದೊಂದಿಗೆ ಕಾನೂನು ಪದವೀಧರೆಯಾಗಿ ತಮಿಳುನಾಡಿನ ಬಿಜೆಪಿಯ ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಕಾಲದ ಕಾಡುಗಳ್ಳ ವೀರಪ್ಪನ್ ಮಗಳು “ವಿದ್ಯಾ“ ಸಂಘ ಸಂಸ್ಕಾರಯುತ ವ್ಯಕ್ತಿತ್ವ ನಿರ್ಮಿಸುತ್ತಿರುವುದಕ್ಕೊಂದು ನಿದರ್ಶನ ಎಂದು X ನಲ್ಲಿ ಸಂಘ ಪರಿವಾರದ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
https://x.com/madhumaiya/status/1761597726381506839?s=20
ಸಂಘ ಪರಿವಾರದವರ X ಪೋಸ್ಟ್ ಗೆ ಪರ ವಿರೋಧ ಚರ್ಚೆ ನಡೆಯುತ್ತಿದ್ದು, ಕೆಲವರು “ಕಳ್ಳರು ಚೆನ್ನಾಗಿ ಬದುಕಬೇಕೆಂದರೆ ಬಿಜೆಪಿ ಸೇರಿದರೆ ಯಾವುದೇ ರೀತಿಯ ಕ್ರಿಮಿನಲ್ ಕೇಸ್ ಗಳು ವಜಾ ಆಗುತ್ತವೆ ಎಂದು ಟೀಕಿಸುತ್ತಿದ್ದಾರೆ.
ವೀರಪ್ಪನ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಕರ್ನಾಟಕ ತಮಿಳುನಾಡು ರಾಜ್ಯಗಳಿಗೆ ಕಂಟಕಪ್ರಾಯನಾಗಿದ್ದ ವೀರಪ್ಪನ್, ವನಸಿರಿ ಸಂಪತ್ತನ್ನು ದೋಚುವ ಜೊತೆಗೆ ಹಲವಾರು ಜೀವಗಳನ್ನು ಬಲಿ ಪಡೆದು ಉಭಯ ರಾಜ್ಯಗಳ ಸರ್ಕಾರಕ್ಕೆ ಸಿಂಹ ಸ್ವಪ್ನವಾಗಿ ಕಾಡಿದ್ದುದು ಕರಾಳ ನೆನಪು.
ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ತನ್ನ ಚಲನವಲನಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಹಲವಾರು ಜನ ಸಾಮಾನ್ಯರನ್ನು ಕೊಂದು ಅಟ್ಟಹಾಸ ಬೀರುವ ಮೂಲಕ ತಾನೇ ಸ್ವಯಂ ಘೋಷಿತ ಕಾಡಿನ ರಾಜನಾಗಿ ಮೆರೆಯುತ್ತಿದ್ದ.
ವೀರಪ್ಪನ್ ಸೆರೆಹಿಡಿಯಲು ಉಭಯ ರಾಜ್ಯಗಳ ಪೊಲೀಸರು ಮಾತ್ರವಲ್ಲದೇ ಸೇನೆಯ ತುಕಡಿಗಳು ಹರಸಾಹಸ ಪಟ್ಟ ನೆನಪುಗಳು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿಯಂತೆ ಅಣಕಿಸುವಂತಾಗಿತ್ತು..
ಈ ನಡುವೆ ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರನ್ನು ಅಪಹರಣ ಮಾಡಿದ ವೀರಪ್ಪನ್ ಅಣ್ಣಾವ್ರನ್ನು 108 ದಿನಗಳ ವನವಾಸ ಮಾಡಿಸಿದ ಕರಾಳ ನೆನಪು ರಾಜ್ಯದ ಕೋಟ್ಯಾಂತರ ರಾಜ್ ಅಭಿಮಾನಿಗಳನ್ನು ಕೆರಳುವಂತೆ ಮಾಡಿದ್ದ, ಇದರಿಂದಾಗಿ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಸರ್ಕಾರ ಪಟ್ಟ ಪಾಡು ಯಾವ ಶತ್ರು ಸರ್ಕಾರಕ್ಕೂ ಬೇಡ ಎನ್ನುವಂತಾಗಿತ್ತು, ಆ ನಂತರ ಮಾಜಿ ಸಚಿವ ನಾಗಪ್ಪ ಅವರ ಅಪಹರಣ ಸರ್ಕಾರವನ್ನೇ ಅಣಕಿಸುವಂತೆ ಮಾಡಿತ್ತು. ಕಡೆಗೂ ಎಸ್.ಟಿ.ಎಫ್ ಕಾಡುಗಳ್ಳ ನರಹಂತಕ ವೀರಪ್ಪನ್ ಗೆ ಎನ್ ಕೌಂಟರ್ ರುಚಿ ತೋರಿಸುವ ಮೂಲಕ ದಶಕಗಳ ತಲೆನೋವನ್ನು ಶಮನ ಮಾಡಿದ್ದು ಈಗ ಕರಾಳ ಇತಿಹಾಸ..
ಅಂತಹ ನರಹಂತಕ ವೀರಪ್ಪನ್ ಮಗಳು ಇದೀಗ ರಾಷ್ಟ್ರೀಯ ಸ್ವಯಂ ಸಂಘ ಪರಿವಾರದ “ವನವಾಸಿ ಕಲ್ಯಾಣ ಆಶ್ರಮ” ದ ಸಹಕಾರದೊಂದಿಗೆ ಕಾನೂನು ಶಿಕ್ಷಣ ಪದವಿ ಪಡೆದಿದ್ದು, ತಮಿಳುನಾಡಿನ ಹಿಂದುಳಿದ ಮೋರ್ಚಾದ ರಾಜ್ಯ ಉಪಾಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ. ಆ ಮೂಲಕ ಕಳ್ಳನ ಮಕ್ಕಳೂ ಸಂಸ್ಕಾರವಂತರಾಗಬಹುದು ಎಂಬುದಕ್ಕೆ ನಿದರ್ಶನವಾಗಿದ್ದಾರೆ.