ಬಂಟ್ವಾಳ : ಸಂಕ್ರಮಣ ಪೂಜೆ ಮುಗಿಸಿ ದೇವಸ್ಥಾನದಿಂದ ಹೊರಗೆ ಬರುತ್ತಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಇಂದು ಮಧ್ಯಾಹ್ನ ಕಾರೊಂದು ಡಿಕ್ಕಿ ಹೊಡೆದಿದ್ದು, ಪರಾರಿಯಾಗಿದ್ದು, ಅದೃಷ್ಟವಶಾತ್ ಶಾಸಕರು ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರು ಹೊರವಲಯದ ಎಡಪದವು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಾಸು ತನ್ನ ಕಾರಿನತ್ತ ಶಾಸಕ ರಾಜೇಶ್ ನಾಯ್ಕ್ ಅವರು ನಡೆದುಕೊಂಡು ಬರುತ್ತಿರುವ ವೇಳೆ ಕಾರು ಡಿಕ್ಕಿ ಹೊಡೆದಿದೆ.
ಮೂಡಬಿದಿರೆ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಕಾರು ಡಿಕ್ಕಿ ಹೊಡೆದು ನೆಲಕ್ಕುರುಳಿದ ಶಾಸಕರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಪಡೆದ ಬಳಿಕ ಅವರು ಮನೆಗೆ ವಾಪಸ್ ಬಂದಿದ್ದಾರೆ.
ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಸ್ಥಳೀಯರು ಗುರುಪುರದಲ್ಲಿ ತಡೆ ಹಿಡಿದಿದ್ದಾರೆ. ಚಾಲಕ ಸಹಿತ ಕಾರನ್ನು ಬಜಪೆ ಪೋಲೀಸರಿಗೆ ಒಪ್ಪಿಸಿಸಲಾಗಿದೆ. ಕಾರು ಚಾಲಕನನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ