ಬೆಂಗಳೂರಿನಲ್ಲಿ ನೀರಿನ ಅಭಾವ ತಪ್ಪಿಸಲು ಬಿಬಿಎಂಪಿ ಹಾಗೂ ಜಲಮಂಡಳಿ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ವಾಟರ್ ಟ್ಯಾಂಕರ್ ಮಾಫಿಯಾ ತಡೆಗಟ್ಟಲು ಅತ್ಯಂತ ಕಠಿಣ ಕ್ರಮ ಕೈಗೊಳ್ಳಲು, ಜಲಮಂಡಳಿ, ಬಿಬಿಎಂಪಿ ಜಂಟಿ ಕಾರ್ಯಾಚರಣೆ ನಡೆಸಲು ಸನ್ನದ್ಧವಾಗಿದೆ. ನೀರಿನ ಹಾಹಾಕಾರ ಹಿನ್ನೆಲೆಯಲ್ಲಿ ಇಂದು ಜಂಟಿ ತುರ್ತು ಸಭೆ ನಡೆಸಿದ ಜಲಮಂಡಳಿ ಛೇರ್ಮೆನ್ ಹಾಗೂ ಬಿಬಿಎಂಪಿ ಚೀಫ್ ಕಮೀಷನರ್ ಹಲವು ನೀರಿನ ಸಮಸ್ಯೆ ನೀಗಿಸಲು ಹಲವು ಕ್ರಮಗಳನ್ನ ಕೈಗೊಂಡಿರುವ ಬಗ್ಗೆ ತಿಳಿಸಿದ್ದಾರೆ.
ಇದೇ ವೇಳೆ ಮಾರ್ಚ್ 1 ರಿಂದ 7ನೇ ತಾರೀಖಿನ ಒಳಗೆ ಎಲ್ಲಾ ವಾಟರ್ ಟ್ಯಾಂಕರ್ ಗಳು ಬಿಬಿಎಂಪಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸುವುದು ಕಡ್ಡಾಯ. ನಮ್ಮಲ್ಲಿ ಟ್ರೇಡ್ ಲೈಸೆನ್ಸ್ ಪಡೆದಿರುವ ಟ್ಯಾಂಕರ್ ತುಂಬಾ ಕಡಿಮೆ ಇದೆ. ನೀರು ಸರಬರಾಜು ಮಾಡುವ ವ್ಯಾಪಾರಿಗಳಿಗೆ ಟ್ರೇಡ್ ಲೈಸೆನ್ಸ್ ಕಡ್ಡಾಯ ಮಾಡಲಾಗಿದೆ ಎಂದು ಬಿಬಿಎಂಪಿ ಚೀಫ್ ಕಮೀಷನರ್ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
3.5 ಸಾವಿರ ಟ್ಯಾಂಕರ್ ಗೆ ಡಿಜಿಟಲ್ ರಿಜಿಸ್ಟ್ರೇಷನ್ ಇರಲಿದೆ. ಒಂದು ವೇಳೆ ರಿಜಿಸ್ಟ್ರೇಷನ್ ಮಾಡಿಸದೆ ಇದ್ದಲ್ಲಿ ಅಂತಹ ಟ್ಯಾಂಕರ್ ಗಳನ್ನ ಸೀಝ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ನಿಗದಿತ ಸಮಯದ ಒಳಗೆ ರಿಜಿಸ್ಟ್ರೇಷನ್ ಮಾಡಿಸದೇ ಇದ್ದಲ್ಲಿ, ವಶಪಡಿಸಿಕೊಳ್ಳುವ ಟ್ಯಾಂಕರನ್ನು ಪಾಲಿಕೆ ನೀರು ಸರಬರಾಜಿಗೆ ಬಳಸಿಕೊಳ್ಳಲಿದೆ. ನಾಳೆ ಮತ್ತು ನಾಡಿದ್ದು, ವಾಟರ್ ಟ್ಯಾಂಕರ್ ಅಸೋಸಿಯೇಷನ್ ಜೊತೆ ಸಭೆ ನಡೆಸಿ ದರವನ್ನು ನಿಗದಿ ಮಾಡಲಾಗುತ್ತದೆ. ಇಷ್ಟೆ ಅಲ್ಲದೆ ಪ್ರತಿ ವಾರ್ಡ್ಗೆ ನೀರಿನ ಸರಬರಾಜು ನಿಗಾ ಇಡಲು ವಾರ್ಡ್ ಇಂಜಿನಿಯರ್ ನೇಮಕ ಹಾಗೂ ಜಲಮಂಡಳಿ ಸಂಯೋಜಕರನ್ನು ನಿಯೋಜನೆ ಮಾಡಲಾಗುತ್ತದೆ.
110 ಹಳ್ಳಿಗೆ ವಾಟರ್ ಟ್ಯಾಂಕರ್ ಕಳುಹಿಸುವ ಜೊತೆಗೆ 200 ವಾಟರ್ ಟ್ಯಾಂಕರ್ ಡಿಸಿ ಕಡೆಯಿಂದ ನಗರದಲ್ಲಿ ನೀರು ಸರಬರಾಜಿಗೆ ನಿಯೋಜನೆ ಮಾಡಲಾಗುತ್ತದೆ. ಈ ರೀತಿ ನಿಯೋಜಿಸಲ್ಪಟ್ಟ ವಾಟರ್ ಟ್ಯಾಂಕರ್ ಮೇಲೆ ನಿಗಾ ಇಡಲು, ಜಲಮಂಡಳಿಯಿಂದ ಇಂಜಿನಿಯರ್ ನೇಮಕ ಮಾಡಲಾಗುತ್ತದೆ. ಜನಸಾಮಾನ್ಯರು ನೀರಿನ ಸಮಸ್ಯೆ ಪರಿಹಾರಕ್ಕಾಗಿ ಪ್ರತ್ಯೇಕ ಸಹಾಯವಾಣಿಯನ್ನೇ ತೆರೆಯಲಾಗುವುದು ಎಂದು ತಿಳಿಸಿದರು.