Thursday, September 11, 2025
27.5 C
Bengaluru
Google search engine
LIVE
ಮನೆಆರೋಗ್ಯ19 ಲಕ್ಷ ಹೆಣ್ಣುಮಕ್ಕಳಿಗೆ ಶುಭ ಸುದ್ದಿ : ಶುಚಿ ಯೋಜನೆಗೆ ದಿನೇಶ್ ಗುಂಡೂರಾವ್ ಮರುಚಾಲನೆ

19 ಲಕ್ಷ ಹೆಣ್ಣುಮಕ್ಕಳಿಗೆ ಶುಭ ಸುದ್ದಿ : ಶುಚಿ ಯೋಜನೆಗೆ ದಿನೇಶ್ ಗುಂಡೂರಾವ್ ಮರುಚಾಲನೆ

ಬೆಂಗಳೂರು : ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಶುಚಿ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಮರುಚಾಲನೆ ನೀಡಿದ್ದಾರೆ. 10 ರಿಂದ 18 ವರ್ಷದ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಉಚಿತವಾಗಿ ನೀಡುವ ಮಹತ್ವದ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಮುಟ್ಟಿನ ನೈರ್ಮಲ್ಯಕ್ಕಾಗಿ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿತರಿಸುವ, ಕರ್ನಾಟಕ ಸರ್ಕಾರ ಹಮ್ಮಿಕೊಂಡ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.

ರಾಜ್ಯದ ಸರ್ಕಾರಿ, ಅನುದಾನಿತ ಶಾಲಾ ಕಾಲೇಜುಗಳಲ್ಲಿಯ ಸುಮಾರು 19 ಲಕ್ಷ ಹೆಣ್ಣುಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್ ಗಳ ವಿತರಣೆ ಬುಧವಾರದಿಂದ ಆರಂಭಿಸಲಾಗಿದೆ. ಆರೋಗ್ಯ ಇಲಾಖೆ ನೇರವಾಗಿ ಶಾಲೆಗಳಿಗೆ ಸ್ಯಾನಿಟರಿ ಪ್ಯಾಡ್ ಗಳನ್ನ ತಲುಪಿಸಲಿದ್ದು, ಶಾಲೆಯ ಮುಖ್ಯಸ್ಥರು ಹೆಣ್ಣುಮಕ್ಕಳಿಗೆ ಕಿಟ್ ಗಳನ್ನ ವಿತರಣೆ ಮಾಡಿದ್ದಾರೆ. ಒಂದು ಪ್ಯಾಕ್ ನಲ್ಲಿ 10 ಸ್ಯಾನಿಟರಿ ನ್ಯಾಪ್‌ಕಿನ್ ಗಳಿದ್ದು, ಒಂದು ವರ್ಷಕ್ಕೆ ಸಾಕಾಗುವಷ್ಟು ಸ್ಯಾನಿಟರಿ ನ್ಯಾಪ್‌ಕಿನ್ ಗಳಿರುವ ಕಿಟ್ ಗಳನ್ನ ಒಟ್ಟಿಗೆ ವಿದ್ಯಾರ್ಥಿನಿಯರಿಗೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಣ್ಣುಮಕ್ಕಳ ಆರೋಗ್ಯ ದೃಷ್ಟಿಯಿಂದ ಶುಚಿ ಯೋಜನೆ ಮಹತ್ವದ್ದಾಗಿದೆ ಎಂದರು. ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿಯೇ ಯೋಜನೆಯನ್ನ ಪ್ರಾರಂಭಿಸಲಾಗಿತ್ತು. ಆದರೆ, ನಂತರದ ಸರ್ಕಾರದಲ್ಲಿ ಇಂಥಹ ಮಹತ್ವದ ಯೋಜನೆ ಏಕೆ ಸ್ಥಗಿತಗೊಳಿಸಲಾಯಿತು ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಆರೋಗ್ಯ ಸಚಿವನಾದ ಬಳಿಕ ಯೋಜನೆಗೆ ಮರುಚಾಲನೆ ನೀಡುವುದಾಗಿ ಘೋಷಿಸಿದ್ದೆ.

ಮಹಿಳೆಯರ ಪರವಾಗಿ ಕಾಂಗ್ರೆಸ್ ಸರ್ಕಾರ ಶಕ್ತಿ, ಗೃಹ ಲಕ್ಷ್ಮೀ ಯೋಜನೆಗಳನ್ನ ಜಾರಿಗೆ ತಂದಿರುವಾಗ ಹೆಣ್ಣುಮಕ್ಕಳಿಗೆ ಆರೋಗ್ಯ ದೃಷ್ಠಿಯಿಂದ ಆರಂಭವಾಗಿದ್ದ ಶುಚಿ ಯೋಜನೆ ಕಡೆಗಣಿಸಲು ಸಾಧ್ಯವಿಲ್ಲ. 47 ಕೋಟಿ ವೆಚ್ಚದಲ್ಲಿ 19 ಲಕ್ಷ ಶಾಲಾ ಕಾಲೇಜು ಹೆಣ್ಣುಮಕ್ಕಳಿಗೆ ವರ್ಷಕ್ಕಾಗುವಷ್ಟು ಸ್ಯಾನಿಟರಿ ನ್ಯಾಪ್‌ಕಿನ್ ಗಳನ್ನ ಉಚಿತವಾಗಿ ನೀಡುತ್ತಿದ್ದೇವೆ. ಎಷ್ಟೋ ಬಡ ಕುಟುಂಬದಲ್ಲಿರುವ ಹೆಣ್ಣುಮಕ್ಕಳಿಗೆ ಇದನ್ನ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಶುಚಿ ಯೋಜನೆಯಿಂದ ಹೆಣ್ಣುಮಕ್ಕಳಲ್ಲಿ‌ ಮಂದಹಾಸ ಮೂಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸಂತಸ ವ್ಯಕ್ತಪಡಿಸಿದರು.

ಋತುಸ್ರಾವದ ಒಂದು ನೈಸರ್ಗಿಕ ಕ್ರಿಯೆ. ಈ ಬಗ್ಗೆ ಹೆಣ್ಣುಮಕ್ಕಳು ಹಿಂಜರಿಕೆಯ ಮನೋಭಾವ ಹೊಂದುವ ಅಗತ್ಯವಿಲ್ಲ. ಕೆಲವು ಮೂಡ ನಂಬಿಕೆಗಳು ಇವೆ. ಅವುಗಳನ್ನ ದೂರಗೊಳಿಸಿ ಶುಚಿತ್ವ ಹಾಗೂ ಸ್ಯಾನಿಟರಿ ನ್ಯಾಪ್ ಕಿನ್ ಗಳ ಬಳಕೆಯ ಬಗ್ಗೆ ಅರಿವು ಮೂಡಿಸುವ ಮುಖ್ಯವಾಗಿದೆ. ಶುಚಿತ್ವ ಹಾಗೂ ಮುಟ್ಟಿನ ವೈಜ್ಞಾನಿಕ ನಿರ್ವಹಣೆಯು ಹೆಣ್ಣುಮಕ್ಕಳ ಆರೋಗ್ಯ ದೃಷ್ಟಿಯಿಂದ ಮುಖ್ಯವಾಗಿದೆ. ಸ್ಯಾನಿಟರಿ ಪ್ಯಾಡ್ ಗಳಿಗೆ ಪರ್ಯಾಯವಾಗಿ ಶುಚಿ ಯೋಜನೆಯಡಿ ಮುಟ್ಟಿನ ಮೈತ್ರಿ ಕಪ್ ಗಳನ್ನೂ ವಿತರಿಸುವ ಪ್ರಾಯೋಗಿಕ ಕಾರ್ಯಕ್ರಮವನ್ನ ಎರಡು ಜಿಲ್ಲೆಗಳಲ್ಲಿ ಜಾರಿಗೊಳಿಸಿದ್ದೇವೆ. ಮೈತ್ರಿ ಮುಟ್ಟಿನ ಕಪ್ ಗಳು ಪರಿಸರ ಸ್ನೇಹಿಯಾಗಿದ್ದು, ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳ ಬದಲು ಮುಟ್ಟಿನ ಮೈತ್ರಿ ಕಪ್ ಗಳ ಬಳಕೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನ ಆರೋಗ್ಯ ಇಲಾಖೆ ಕೈಗೆತ್ತಿಕೊಳ್ಳಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments