ಬೆಂಗಳೂರು: ಸಂಸದರಾದ ಅನಂತಕುಮಾರ್ ಹೆಗಡೆ ಅವರು ಸಂವಿಧಾನದ ಕುರಿತಾಗಿ ಕೊಟ್ಟ ಹೇಳಿಕೆ ಮತ್ತು ಬಿಜೆಪಿಗೆ ಯಾವುದೇ ರೀತಿಯ ಸಂಬಂಧ ಇಲ್ಲ. ರಾಷ್ಟ್ರೀಯ ನಾಯಕರು ಕೂಡ ಅದನ್ನು ಗಮನಿಸಿ ಅವರಿಂದ ಸ್ಪಷ್ಟನೆ ಕೇಳಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಕಾರ್ಯಕರ್ತರೊಬ್ಬರು ಪ್ರಧಾನ ಮಂತ್ರಿಯವರಿಗೆ ಅವಮಾನಕರವಾಗಿ ಹೇಳಿಕೆ ನೀಡಿದ್ದಾರೆ. ನಮ್ಮ ಪಕ್ಷದಲ್ಲಿ ಇಂಥ ಚಟುವಟಿಕೆ ಆದರೆ ಅದನ್ನು ಗಮನಿಸಿ ತಕ್ಷಣದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನಕ್ಕೆ ತಲೆಬಾಗಿ ನಮಿಸಿ ಸಂಸತ್ತನ್ನು ಪ್ರವೇಶ ಮಾಡಿದವರು. ಆದರೆ, ಸಂವಿಧಾನಕ್ಕೆ ಗೌರವಿಸಿ ಸಂಸತ್ ಪ್ರವೇಶಿಸಿದ ಪ್ರಧಾನಿಯವರ ಕುರಿತು ಕಾಂಗ್ರೆಸ್ ಕಾರ್ಯಕರ್ತ ಇಷ್ಟೊಂದು ಅವಹೇಳನಕಾರಿಯಾಗಿ ಮಾತನಾಡಿದಾಗ ಆತನಿಗೆ ತಿಳಿಹೇಳುವ ಮತ್ತು ಆತನ ಹೇಳಿಕೆಯನ್ನು ಖಂಡಿಸುವ ಕನಿಷ್ಠ ವರ್ತನೆಯನ್ನು ಕಾಂಗ್ರೆಸ್ಸಿನ ಯಾವ ನಾಯಕರೂ ಮಾಡಿಲ್ಲ ಎಂದು ಆಕ್ಷೇಪಿಸಿದರು.
ಗೌರವಸ್ಥರಾದ ಮಲ್ಲಿಕಾರ್ಜುನ ಖರ್ಗೆಯವರಿಗೂ ಇಂಥ ಮಾತುಗಳು ಇಷ್ಟ ಆಗುವುದಿಲ್ಲ ಎಂದು ಭಾವಿಸುತ್ತೇನೆ. ಅವರ ಪಕ್ಷದ ಯಾರಾದರೂ ಕಾರ್ಯಕರ್ತರು ಈ ರೀತಿ ಮಾತನಾಡಿದಾಗ ಅವರು ವೈಯಕ್ತಿಕವಾಗಿ ನೊಂದುಕೊಳ್ಳುತ್ತಾರೆ ಎಂಬುದು ನನ್ನ ಭಾವನೆ ಎಂದ ಅವರು, ಇಂತಹ ಕಾರ್ಯಕರ್ತರಿಗೆ ಬುದ್ಧಿವಾದ ಹೇಳಬೇಕಿತ್ತು ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರು ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಕುಂಟುನೆಪದ ಮೂಲಕ ಗಮನ ಬೇರೆ ಕಡೆ ಸೆಳೆಯುವುದನ್ನು ಬಿಟ್ಟುಬಿಡಲಿ. ಈ ಸರಕಾರ ಮುಂದಿನ ಪೂರ್ಣ ಅವಧಿಯವರೆಗೆ ಜನಪರ ಕೆಲಸ ಮಾಡಬೇಕು. ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ಒತ್ತಿ ಹೇಳುತ್ತೇವೆ. ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.