ಬೆಂಗಳೂರು: ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿಯರು ದೇಶ ಕಂಡ ಅಪ್ರತಿಮ ರಾಜಕಾರಣಿ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದ ಶ್ರೇಷ್ಠ ವ್ಯಕ್ತಿತ್ವ ಅವರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಡಾಲರ್ಸ್ ಕಾಲೊನಿಯ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎಲ್.ಕೆ.ಅಡ್ವಾಣಿಯವರಿಗೆ ಭಾರತ ರತ್ನ ಗೌರವ ಲಭಿಸಿರುವುದು ಈ ದೇಶದ ಕೋಟ್ಯಂತರ ಜನರಿಗೆ ಸಂತಸ ತಂದಿದೆ. ಪಕ್ಷ ಮತ್ತು ರಾಜ್ಯದ ಜನತೆಯ ಪರವಾಗಿ ಎಲ್.ಕೆ.ಅಡ್ವಾಣಿಯವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಅಡ್ವಾಣೀಜೀ ಎಂದರೆ ಒಬ್ಬ ಹೋರಾಟಗಾರರು. ಉತ್ತಮ ಸಂಘಟಕರು ಕೂಡ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ನಿರ್ಮಾಣಕ್ಕೆ ಎಲ್.ಕೆ.ಅಡ್ವಾಣಿಯವರ ರಥಯಾತ್ರೆ ಪ್ರಮುಖ ಕಾರಣ. ಒಬ್ಬ ಶ್ರೇಷ್ಠ ಜನನಾಯಕನನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ನಮ್ಮೆಲ್ಲರಿಗೂ ಸಂತೋಷ ತಂದು ಕೊಟ್ಟಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಉತ್ತಮ ತೀರ್ಮಾನ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.