Wednesday, April 30, 2025
35.6 C
Bengaluru
LIVE
ಮನೆUncategorizedಅಮಿತ್​ ಶಾ ಜೊತೆ ನಾಳೆ ಕುಮಾರಸ್ವಾಮಿ ಬ್ರೇಕ್ ಫಾಸ್ಟ್ ಮೀಟಿಂಗ್

ಅಮಿತ್​ ಶಾ ಜೊತೆ ನಾಳೆ ಕುಮಾರಸ್ವಾಮಿ ಬ್ರೇಕ್ ಫಾಸ್ಟ್ ಮೀಟಿಂಗ್

ಬೆಂಗಳೂರು: ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತುಕತೆ ನಡೆಸಲಿದ್ದಾರೆ. ಬೆಳಗ್ಗೆ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಈ ಭೇಟಿ ನಡೆಯಲಿದ್ದು, ಈ ಬಗ್ಗೆ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ. ಮಂಗಳವಾರ ಬೆಳಗ್ಗೆ ಅಮಿತ್ ಶಾ ಅವರ ಜತೆ ಬ್ರೇಕ್ ಫಾಸ್ಟ್ ಮೀಟಿಂಗ್ ಇದೆ. ಲೋಕಸಭೆ ಚುನಾವಣೆ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಲಾಗುವುದು. ನಮ್ಮಲ್ಲಿರುವ ಮಾಹಿತಿಯನ್ನು ಅಮಿತ್ ಶಾ ಅವರೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಒಟ್ಟಾರೆಯಾಗಿ ರಾಜ್ಯದ 28 ಕ್ಷೇತ್ರಗಳನ್ನು ನಮ್ಮ ಮೈತ್ರಿಕೂಟ ಗೆಲ್ಲಬೇಕು. ಯಾವುದೇ ಕ್ಷೇತ್ರದಲ್ಲಿಯೂ ಸಮಸ್ಯೆ ಆಗಬಾರದು. ಹೊಂದಾಣಿಕೆಗೆ ಧಕ್ಕೆ ಆಗಬಾರದು, ಗುರಿ ತಲುಪಲು ಯಾವ ಲೋಪ ಆಗಬಾರದು ಎಂಬ ಉದ್ದೇಶ ನಮ್ಮದು. ಅದಕ್ಕೆ ಪೂರಕವಾಗಿ ಎಲ್ಲ ರೀತಿಯಲ್ಲಿ ಚರ್ಚೆ ಮಾಡ್ತೇವೆ. ನಂತರ ಸಂಜೆ ಚನ್ನಪಟ್ಟಣದಲ್ಲಿ ರೋಡ್ ಶೋನಲ್ಲಿ ಇಬ್ಬರೂ ಭಾಗವಹಿಸುತ್ತೇವೆ. ಇಡಿ ರಾಜ್ಯಕ್ಕೆ ಚನ್ನಪಟ್ಟಣದಿಂದಲೇ ಒಂದು ಸ್ಪಷ್ಟ ಸಂದೇಶ ಕೊಡುತ್ತೇವೆ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದರು. ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಕನಕಪುರ, ರಾಮನಗರ, ಚನ್ನಪಟ್ಟಣ, ಕುಣಿಗಲ್ ನಲ್ಲಿ ಪ್ರವಾಸ ಮಾಡುವೆ. ತುಮಕೂರು, ಚಾಮರಾಜನಗರ, ಮೈಸೂರು ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ 14 ಕಡೆ ಪ್ರಚಾರ ನಡೆಸುತ್ತೇನೆ. ಕರಾವಳಿ ಬಿಟ್ಟು ಎಲ್ಲ ಕಡೆ ಪ್ರಚಾರ ಮಾಡುತ್ತೇನೆ ಎಂದರು.

ಸುಮಲತಾ ಬೆಂಬಲ ನೀಡುವ ಬಗ್ಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ಸುಮಲತಾ ಅವರು ಒಂದು ಪದ ಹೇಳಿದ್ದಾರೆ. ಆರೋಗ್ಯಕರ ಚರ್ಚೆ ಆಗಿದೆ ಎಂದು ಅವರು ಹೇಳಿದ್ದಾರೆ. ಸೂಕ್ಷ್ಮವಾಗಿ ಹೇಳಿದ್ದಾರೆ. ಅದಕ್ಕೆ ಕಾಂಗ್ರೆಸ್ ನವರು ಭಯ ಬಿದ್ದು ಮಾತಾಡ್ತಾ ಇದ್ದಾರೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಡಿಕೆ ಸಹೋದರರಿಗೆ ತಿರುಗೇಟು ಕೊಟ್ಟ ಹೆಚ್ಡಿಕೆ

ರಾಮನಗರ ಜನರ ಸೇವೆ ಮಾಡಲು ಅಣ್ಣ ತಮ್ಮ ಇರುವುದು ಎಂದು ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ತೀಕ್ಷ್ಣವಾಗಿ ಉತ್ತರ ಕೊಟ್ಟ ಕುಮಾರಸ್ವಾಮಿ ಅವರು; ಅವರು ಏನು ಸೇವೆ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಬೆಂಗಳೂರಿನಲ್ಲಿ ಫ್ಲಾಟ್ ಪ್ಲಾನ್ ಮಂಜೂರಾತಿಗೆ ಪ್ರತೀ ಚದರ ಅಡಿಗೆ 100 ರೂಪಾಯಿ ಫಿಕ್ಸ್ ಮಾಡಿರುವುದು ಸೇವೆ ಅಲ್ಲವೇ? ಅದು ಒಂದು ಸೇವೆ! ಎಲ್ಲರಿಗೂ ಧಮ್ಕಿ ಹಾಕೋದು ಒಂದು ಸೇವೆ!! ಅದನ್ನೆ ತಾನೇ ಮಾಡ್ತಾ ಇರೋದು? ಎಂದು ಕುಟುಕಿದರು.

ಅವರ ಸೇವೆಯೇ ಬೇರೆ ರೀತಿ. ಸೇವೆ ಮಾಡುತ್ತಿದ್ದಾರೋ ಅಥವಾ ರಾಜ್ಯವನ್ನು ಯಾವ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೋ ಮುಂದಿನ ದಿನಗಳಲ್ಲಿ ನೋಡೋಣ. ನಾವು ಯಾತಕ್ಕೆ ಇದ್ದೀವಿ? ನಾವು ನಿದ್ದೆ ಮಾಡೋಕೆ ಬಂದಿದ್ದೀವಾ? ಅವರು ಮಾತ್ರವಾ ಸೇವೆ ಮಾಡೋದು? ಪಾಪ.. ಪಂಚಾಯತಿ ಸದಸ್ಯರ ರೀತಿ ಕೆಲಸ ಮಾಡುತ್ತಾರಂತೆ!! ಹಾಗಾದರೆ, ಪಂಚಾಯತಿ ಸದಸ್ಯರು ಯಾಕೆ? ಇವರು ಅಲ್ಲಿ ಹೋಗಿ ಕೈ ಹಾಕಿದರೆ ಪಂಚಾಯತಿ ಸದಸ್ಯರು ಏನ್ ಮಾಡಬೇಕು? ಅವರು ಮಾತುಗಳಿಗೂ ನಡುವಳಿಕೆಗೂ ಬಹಳ ವ್ಯತ್ಯಾಸ ಇದೆ ಎಂದು ತರಾಟೆಗೆ ತೆಗೆದುಕೊಂಡರು.

ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಎಲ್ಲಿ ಹೋಗಿದ್ದರು ಎಂದು ಕೇಳುತ್ತಾರೆ. ಅನಿತಾ ಕುಮಾರಸ್ವಾಮಿ ರಾಮನಗರ ಶಾಸಕರಿದ್ದರು. ನಾನು ಚನ್ನಪಟ್ಟಣ ಶಾಸಕನಿದ್ದೆ. ರಾಮನಗರ, ಚನ್ನಪಟ್ಟಣಕ್ಕೆ ನಾನು ಏನು ಸೇವೆ ಸಲ್ಲಿಸಬೇಕು ಸಲ್ಲಿಸಿದ್ದೇನೆ. ಪ್ರಚಾರ ಮಾಡಿಕೊಂಡಿಲ್ಲ. ಪ್ರತಿ ಕುಟುಂಬಕ್ಕೂ ಕೈಲಾದ ಸಹಾಯ ಮಾಡಿದ್ದೇವೆ. ಇವರಂತೆ ನಾವು ಡಂಗೂರ ಹೊಡೆದ್ವಾ? ಪಾಪ.. ಹೆಣ ಹೊರೋಕೆ ಹೋಗಿದ್ದರಂತೆ ಇವರು. ನಾವು ಜನರು ಹೆಣವಾಗದಂತೆ ನೋಡಿಕೊಂಡೆವು. ಅವರ ಜೀವ ಉಳಿಸಲಿಕ್ಕೆ ಪ್ರಯತ್ನ ಮಾಡಿದೆವು ತಿರುಗೇಟು ಕೊಟ್ಟರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments