ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಬಿಜೆಪಿ ನಿಯೋಗವು ಇಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಬಿಜೆಪಿ ರಾಜ್ಯದಲ್ಲಿ ಆಪರೇಷನ್ ಕಮಲದ ಯತ್ನ ಮುಂದುವರೆಸಿದೆ. ನಮ್ಮ ಶಾಸಕರಿಗೆ 50 ಕೋಟಿ ರೂ. ಆಫರ್ ಮಾಡಿದ್ದಾರೆಂಬ ಸುಳ್ಳು ಆರೋಪವನ್ನು ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯೊಬ್ಬರು ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದ ತೇಜೋವಧೆ ಮಾಡುವ ದುರುದ್ದೇಶದಿಂದ, ಯಾವುದೇ ಪುರಾವೆ ಒದಗಿಸದೇ ಮಾಡಿದ ಆರೋಪ ಖಂಡನೀಯ. ಸಿದ್ದರಾಮಯ್ಯನವರು ಈ ಆರೋಪಕ್ಕೆ ಸಾಕ್ಷಿ ನೀಡಬೇಕೆಂದು ಒತ್ತಾಯಿಸಲಾಗಿದೆ.
ಅವರ ಬೇಜವಾಬ್ದಾರಿ ಆರೋಪದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವ ಸಾಧ್ಯತೆ ಇದೆ. ಅವರು ಪಕ್ಷದ ಕ್ಷಮೆ ಯಾಚಿಸಿ ತಮ್ಮ ಆರೋಪವನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಲಾಗಿದೆ. ಚುನಾವಣಾ ಆಯೋಗವು ಈ ಹೇಳಿಕೆ ವಿರುದ್ಧ ಕ್ರಮ ಜರುಗಿಸಲು ಕೋರುವುದಾಗಿ ಮನವಿ ತಿಳಿಸಿದೆ.
ಬಿಜೆಪಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಅವರು ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ವಿರುದ್ಧ ಹೇಳಿಕೆ ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಇನ್ನೊಂದು ಮನವಿ ತಿಳಿಸಿದೆ.
‘ಶ್ರೀನಿವಾಸ ಪೂಜಾರಿ ಅವರಿಗೆ ಕನ್ನಡ ಬಿಟ್ಟರೆ ಹಿಂದಿ, ಇಂಗ್ಲಿಷ್ ಬರುವುದಿಲ್ಲ. ಅವರನ್ನು ಆಯ್ಕೆ ಮಾಡಿದರೆ ದೆಹಲಿಯಲ್ಲಿ ಕೆಲಸಗಳು ಆಗುವುದಿಲ್ಲ’ ಎಂದು ಹೇಳಿಕೆ ನೀಡಿದ ಕುರಿತು ಮನವಿ ಆಕ್ಷೇಪಿಸಿದೆ. ಭಾಷೆಯ ಹೆಸರಿನಲ್ಲಿ ಮತ ಯಾಚಿಸಿ ಪ್ರತಿಸ್ಪರ್ಧಿಯನ್ನು ಗೆಲ್ಲಿಸದಂತೆ ಹೇಳಿಕೆ ನೀಡಿದ ಜಯಪ್ರಕಾಶ ಹೆಗ್ಡೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಮನವಿಯಲ್ಲಿ ಕೋರಲಾಗಿದೆ.
ಶಾಸಕರು ಮತ್ತು ಮಾಜಿ ಸಚಿವ ಸುರೇಶ್ ಕುಮಾರ್, ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ್, ಬಿಜೆಪಿ ರಾಜ್ಯ ವಕ್ತಾರರಾದ ಪ್ರಕಾಶ್ ಶೇಷರಾಘವಾಚಾರ್, ಹೆಚ್. ವೆಂಕಟೇಶ ದೊಡ್ಡೇರಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಅವರು ನೃಪತುಂಗ ರಸ್ತೆಯಲ್ಲಿರುವ ಚುನಾವಣಾ ಆಯೋಗ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದರು.