ಬೆಂಗಳೂರು : ರಾಜ್ಯದ ಬಡ, ಮಧ್ಯಮ ವರ್ಗದ ಜನರ ಹಾಗೂ ಮಹಿಳೆಯರು, ಯುವಕರು, ಕೃಷಿಕರು, ಕ್ರೀಡಾಪಟುಗಳು ಸೇರಿದಂತೆ ಸರ್ವಜನರ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ ಎಂದು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷವು ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಇಡೀ ದೇಶವೇ ಕರ್ನಾಟಕದ ಕಡೆ ನೋಡುವಂತೆ ಮಾಡಿದ್ದರು. ಪ್ರಸಕ್ತ ಸಾಲಿನಲ್ಲಿಯೂ ಸಹ ರಾಜ್ಯದ ಜನರ ನಿರೀಕ್ಷೆಯಂತೆ ಆಶಾದಾಯಕ ಬಜೆಟ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವುದಿಲ್ಲ ಎಂಬುದನ್ನು ಸ್ಪಷ್ಟ ಸಂದೇಶ ಸಾರಿದ್ದಾರೆ. ಈ ಮೂಲಕ ವಿಪಕ್ಷದವರ ಆರೋಪಗಳಿಗೆ ದಿಟ್ಟ ಉತ್ತರ ಕೊಟ್ಟಿದ್ದು, ರಾಜ್ಯದ ಅಭಿವೃದ್ಧಿ ವೇಗ ಹೆಚ್ಚಿಸಿರುವುದು ಹಾಗೂ ಅಖಂಡ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯನ್ನು ಮತ್ತೊಮ್ಮೆ ಎತ್ತಿ ಹಿಡಿದಿರುವುದನ್ನು ಬಜೆಟ್‌ನಲ್ಲಿ ಕಾಣಬಹುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಇಲಾಖೆಗಳ ನಿರೀಕ್ಷೆಯಂತೆ ಸಮತೋಲನವಾಗಿ ಹಣ ಹಂಚಿಕೆ ಮಾಡಿ, ಆರ್ಥಿಕ ಶಿಸ್ತನ್ನು ಕಾಪಾಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದರಿಂದ ವಿಪಕ್ಷದವರು ಮುನಿಸಿಕೊಂಡು ಬಾಯ್ಕಟ್ ಮಾಡಿದ್ದಾರೆ. ಇದನ್ನು ಗಮನಿಸಿರುವ ರಾಜ್ಯದ ಜನ, ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಕರ್ನಾಟಕವು ಸರ್ವಾಜನಾಂಗದ ಶಾಂತಿಯ ತೋಟವಾಗಿದೆ. ನೂರಾರು ವರ್ಷಗಳಿಂದ ನಮ್ಮ ಕನ್ನಡ ನೆಲದಲ್ಲಿ ವಿವಿಧ ಧರ್ಮ, ಭಾಷೆ, ಸಂಸ್ಕೃತಿ, ಸಮುದಾಯಗಳ ಜನರು ಸೌಹಾರ್ಧತೆಯಿಂದ ಬಾಳುತ್ತಿದ್ದಾರೆ. ಆದ್ದರಿಂದ ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಗಲಭೆಯನ್ನು ಉಂಟು ಮಾಡುವವರ ವಿರುದ್ಧ ಸರ್ಕಾರವು ಕಠಿಣ ಕ್ರಮ ಕೈಗೊಳ್ಳುವ ದಿಟ್ಟ ನಡೆಯು ಮುಖ್ಯಮಂತ್ರಿಯವರಿಗೆ ಜನರ ಬಗ್ಗೆ ಇರುವ ಕಾಳಾಜಿಯನ್ನು ತೋರುತ್ತದೆ ಎಂದಿದ್ದಾರೆ.
ಸೈಬರ್ ವಂಚಕರಿಗೆ ಬಿಸಿ:- ಕಿಡಿಗೇಡಿಗಳು ಸಮಾಜದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸಿ ಸಾರ್ವಜನಿಕರಲ್ಲಿ ಅಭದ್ರತೆ ಮತ್ತು ಭಯವನ್ನು ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಅಂತವರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಐಟಿಬಿಟಿ ಇಲಾಖೆಯ ಸಹಯೋಗದಲ್ಲಿ ಸತ್ಯ ತಪಾಸಣಾ ತಂಡಗಳನ್ನು (information disorder tackling unit) ರಚಿಸಲು ಮತ್ತು ಒಳಾಡಳಿತ ಇಲಾಖೆಯಲ್ಲಿ ಒಂದು ವಿಶೇಷ ಕೋಶವನ್ನು ರಚಿಸಿ ಅದಕ್ಕೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಅಧಿಕಾರ ನೀಡಿರುವುದು ಅಭಿನಂದನೀಯ ವಿಚಾರ.
ಡೀಪ್‌ಫೇಕ್ ಮತ್ತಿತರ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಗ್ಧ ಸಾರ್ವಜನಿಕರನ್ನು ವಂಚಿಸುವ ಕೃತ್ಯ ಎಸಗುವವರ ವಿರುದ್ಧ ತನಿಖೆ ನಡೆಸಿ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವ ಉದ್ದೇಶದಿಂದ ರಾಜ್ಯದಲ್ಲಿ ಸೈಬರ್ ಕ್ರೈಂ ವಿಭಾಗವನ್ನು ಬಲಪಡಿಸಲು ಒಟ್ಟು 43 ಸಿಇಎನ್ (ಸೈಬರ್, ಎಕಾನಾಮಿಕ್, ನಾರ್ಕೋಟಿಕ್ಸ್) ಪೊಲೀಸ್ ಠಾಣೆಗಳನ್ನು ಉನ್ನತೀಕರಿಸಲು ಒತ್ತು ನೀಡಿರುವುದು ಶ್ಲಾಘನೀಯ. ಇದರಿಂದ ಸೈಬರ್ ಅಪರಾಧಗಳನ್ನು ಮಟ್ಟ ಹಾಕಲು ಸಹಕಾರಿಯಾಗಲಿದೆ. ಅಧಿಕಾರಿ ಮತ್ತು ಸಿಬ್ಬಂದಿಗಳು ಚುರುಕಾಗಿ ಕೆಲಸ ಮಾಡಲು ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ಪೊಲೀಸ್ ಕಾಳಜಿ:- ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರವು ಪೊಲೀಸ್ ಗೃಹ ಯೋಜನೆಯನ್ನು ಜಾರಿಗೆ ತಂದಿತ್ತು. ಪೊಲೀಸ್ ಗೃಹ 2025 ಯೋಜನೆಯಡಿ ಈವರೆಗೆ 800 ಕೋಟಿ ರೂ.ಗಳ ವೆಚ್ಚದಲ್ಲಿ 1,128 ವಸತಿ ಗೃಹಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಲಾಗಿದೆ. 2,956 ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಗೆ 2024-25ನೇ ಸಾಲಿನಲ್ಲಿ 200 ಕೋಟಿ ರೂ.ಗಳ ಅನುದಾನ ಒದಗಿಸಿರುವುದು ಇಲಾಖೆಯ ಸಿಬ್ಬಂದಿಗಳ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ. ಇದು ಅತ್ಯಂತ ಅಭಿನಂದನೀಯ ಎಂದಿದ್ದಾರೆ.
ತಾಂತ್ರಿಕ ಬಲವರ್ಧನೆ:- ಕಟ್ಟಡ ರಹಿತ ಪೊಲೀಸ್ ಠಾಣೆ ಮತ್ತು ಕಚೇರಿಗಳಿಗೆ 30 ಕೋಟಿ ರೂ.ಗಳ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಅನುವು ಮಾಡಿಕೊಡಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯಗಳ (ಫೊರೆನ್ಸಿಕ್ ಸೈನ್ಸ್ ಲ್ಯಾಬ್) ಮೊಬೈಲ್ ಫೊರೆನ್ಸಿಕ್, ಆಡಿಯೋ ಮತ್ತು ವೀಡಿಯೋ ವಿಭಾಗಗಳನ್ನು ಬಲಪಡಿಸಲು 10 ಕೋಟಿ ರೂ.ಗಳ ವೆಚ್ಚದಲ್ಲಿ ಅಗತ್ಯ ಉಪಕರಣಗಳನ್ನು ಮತ್ತು ತಂತ್ರಾಂಶಗಳನ್ನು ಒದಗಿಸಲಾಗಿದೆ. ಅಲ್ಲದೆಡ, ರಾಜ್ಯದ ಎಲ್ಲ ಕಾರಾಗೃಹಗಳ ಸುಗಮ ಆಡಳಿತ ಮತ್ತು ಭದ್ರತೆಗಾಗಿ 5 ಕೋಟಿ ರೂ. ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ (Artificial intaligence) ತಂತ್ರಾಂಶ, ಬ್ಯಾಗೇಜ್ ಸ್ಕ್ಯಾನರ್ ಮುಂತಾದ ಆಧುನಿಕ ಉಪಕರಣಗಳ ಖರೀದಿಸಲು ಒತ್ತು ನೀಡಿರುವುದರಿಂದ ಪೊಲೀಸರ ಕಾರ್ಯ ಕ್ಷಮತೆ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ 100 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸದಾಗಿ ಹೈ ಸೆಕ್ಯೂರಿಟಿ ಕಾರಾಗೃಹ ನಿರ್ಮಾಣ, ಅಗ್ನಿಶಾಮಕ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು The Karnataka fire force act 1964ರನ್ವಯ ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆಯೊಂದಿಗೆ ಶೇ.1ರ ದರದಲ್ಲಿ Fire Cess ವಿಧಿಸುತ್ತಿರುವುದು ಸೂಕ್ತ ನಿರ್ಧಾರ. ಬೆಂಗಳೂರಿನ ಪೊಲೀಸ್ ಸುಲಿವನ್ ಮೈದಾನದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಆಸ್ಟ್ರೋ ಟರ್ಫ್ ಹಾಕಿ ಪ್ರಾಂಗಣವನ್ನು ನಿರ್ಮಿಸಲು ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.
ತುಮಕೂರು ಅಭಿವೃದ್ಧಿಗೆ ಒತ್ತು:- ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ತುಮಕೂರು ಮಹಾನಗರಕ್ಕೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು, ವಸಂತನರಸಾಪುರದಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ನಿರ್ಮಾಣಕ್ಕೆ ಒತ್ತು ನೀಡಿರುವುದು. ಬೆಂಗಳೂರಿನಿಂದ ತುಮಕೂರುವರೆಗೆ ಮೆಟ್ರೋ ರೈಲು ವಿಸ್ತರಣೆಗೆ ಕಾರ್ಯ ಸಾಧಕ ಸಿದ್ಧಪಡಿಸಲು ಬಜೆಟ್‌ನಲ್ಲಿ ಅಸ್ತು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ಬಜೆಟ್‌ನಲ್ಲಿ ಘೋಷಣೆಯಾಗಿರುವ ಈ ಎಲ್ಲ ಯೋಜನೆಗಳು ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.