ತನ್ನನ್ನು ತಾನು ಅರ್ಥಶಾಸ್ತ್ರಜ್ಞ ಎಂದು ಬಿಂಬಿಸಿಕೊಳ್ಳುವ, ಅತಿಹೆಚ್ಚು ಬಜೆಟ್ ಮಂಡಿಸಿದ್ದೇನೆ ಎನ್ನುವ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮತ್ತೊಮ್ಮೆ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಆದರೆ, ಈ ಬಜೆಟ್‌ನಲ್ಲಿ ದೂರದೃಷ್ಟಿಯ ಯಾವುದೇ ಅಂಶವೂ ಕಾಣುತ್ತಿಲ್ಲ. ಕರ್ನಾಟಕ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಪ್ರಾತಿನಿಧ್ಯವೂ ಲಭಿಸಿಲ್ಲ. ಬಹುಶಃ ಉತ್ತರ ಕರ್ನಾಟಕವೂ ಕರ್ನಾಟಕದ ಭಾಗ, ತಾನು ಉತ್ತರ ಕರ್ನಾಟಕಕ್ಕೂ ಮುಖ್ಯಮಂತ್ರಿ ಎಂಬುದನ್ನು ಮರೆತು ಸಿದ್ದರಾಮಯ್ಯನವರು ಬಜೆಟ್ ಮಂಡಿಸಿರುವಂತೆ ಕಾಣುತ್ತಿದೆ.
ನಮ್ಮ ವಿಜಯಪುರ ಜಿಲ್ಲೆಗೆ ಈ ಬಜೆಟ್ ಕೊಡುಗೆ ಒಂದು ದೊಡ್ಡ ಶೂನ್ಯ. ನಮ್ಮ ಜಿಲ್ಲೆಯ ಜನರ ನಿರೀಕ್ಷೆಗಳಿಗೆ, ಬರದ ಬವಣೆಯಿಂದ ನಲುಗಿರುವ ರೈತರಿಗೆ, ಯುವ ಉದ್ಯಮಿಗಳಿಗೆ ಬಜೆಟ್‌ನಲ್ಲಿ ಯಾವುದೇ ಕೊಡುಗೆಗಳಿಲ್ಲದಿರುವುದು ದುರದೃಷ್ಟಕರ. ಸಾಲದ ಹೊರೆ, ಅದರ ಮೇಲೆ ಬರಗಾಲದಿಂದ ನರಳುತ್ತಿರುವ ರೈತರ ಸಾಲವನ್ನಾಗಲಿ, ಬಡ್ಡಿಯನ್ನಾಗಲಿ ಮನ್ನಾ ಮಾಡುವ ಯಾವುದೇ ಕ್ರಮಗಳನ್ನು ಸರ್ಕಾರ ಕೈಗೊಂಡಿಲ್ಲ.
ವಿಜಯಪುರ ಜಿಲ್ಲೆಗೆ ತೋಟಗಾರಿಕಾ ಕಾಲೇಜು, ಫುಡ್ ಪಾರ್ಕ್, ಉಪ ಆಯುಕ್ತರ ಕಚೇರಿಗಳು ಘೋಷಣೆಯಾಗಿದ್ದರೂ, ಅವುಗಳು ಕಾರ್ಯರೂಪಕ್ಕೆ ಬರುವುದು ಯಾವಾಗ ಎಂಬುದಕ್ಕೆ ಯಾವುದೇ ಸ್ಪಷ್ಟ ರೂಪುರೇಷೆಗಳಿಲ್ಲ. ಇದರಿಂದ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಗಳೂ ಇಲ್ಲ. ವಿಜಯಪುರಕ್ಕೆ ಈ ಯೋಜನೆಗಳು ಕೇವಲ ಕಣ್ಣೊರೆಸುವ ತಂತ್ರಗಳಷ್ಟೇ ಆಗಿವೆ.
ರಾಜ್ಯದಲ್ಲಿದ್ದ ವಿತ್ತೀಯ ಶಿಸ್ತನ್ನು ಹಾಳು ಮಾಡುವುದೇ ತನ್ನ ಗುರಿ ಎಂದು ಸಿದ್ದರಾಮಯ್ಯನವರು ಭಾವಿಸಿದ್ದಾರೆ. ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಬಾಯಲ್ಲಿ ಹೇಳುತ್ತಾ, ವಿವಿಧ ಗ್ಯಾರಂಟಿ ಘೋಷಣೆಗಳನ್ನು ಮೊಳಗಿಸುತ್ತಾ, ರಾಜ್ಯವನ್ನು ಸರ್ಕಾರ ಸಾಲದ ಕೂಪಕ್ಕೆ ತಳ್ಳುತ್ತಿದೆ.
ಅಧಿಕಾರಕ್ಕೆ ಬಂದು ಕೇವಲ 9 ತಿಂಗಳಲ್ಲಿ ₹1,93,246 ಕೋಟಿ ಸಾಲ ಮಾಡಿದ್ದಾರೆ. ಈ ಮೂಲಕ ಪ್ರತಿಯೊಬ್ಬ ಕನ್ನಡಿಗನ ತಲೆ ಮೇಲೆ 28 ಸಾವಿರ ರೂಪಾಯಿ ಸಾಲ ಹೇರಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲೂ, ಬಿಜೆಪಿ ಎಲ್ಲಿಯೂ ರಾಜ್ಯದ ಆರ್ಥಿಕ ಹಳಿ ತಪ್ಪದಂತೆ ನೋಡಿಕೊಂಡಿತ್ತು.
ಸಿದ್ದರಾಮಯ್ಯನವರು ಒಂದು ಸಮುದಾಯದ ತುಷ್ಟೀಕರಣಕ್ಕಾಗಿ ಲಕ್ಷಾಂತರ ಕೋಟಿ ಸಾಲ ಮಾಡಿ ಕನ್ನಡಿಗರನ್ನು ಸಂಪೂರ್ಣವಾಗಿ ಮುಳುಗಿಸಿದ್ದಾರೆ. ವಾಣಿಜ್ಯ ತೆರಿಗೆಯನ್ನು 58% ಹೆಚ್ಚಿಸಿರುವ ಈ ಬಜೆಟ್ ಉದ್ಯಮಗಳನ್ನೂ ಮಕಾಡೆ ಮಲಗಿಸುವ ಪ್ರಯತ್ನದಂತಿದೆ. ನೋಂದಣಿ ಮುದ್ರಾಂಕ, ಅಬಕಾರಿ ಸುಂಕ ಎಲ್ಲದರಲ್ಲೂ ಹೆಚ್ಚಳವಾಗಿದೆ.
ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂಪಾಯಿ, ವಕ್ಫ್ ಬೋರ್ಡ್‌ಗೆ 100 ಕೋಟಿ ರೂಪಾಯಿ, ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಪೋರೇಷನ್ನಿಗೆ 393 ಕೋಟಿ ನೀಡಿ, ತುಷ್ಟೀಕರಣದ ರಾಜಕಾರಣ ನಡೆಸುತ್ತಿರುವ ಸಿದ್ದರಾಮಯ್ಯನವರು, ತನ್ನನ್ನು ತಾನು ಸಮಾಜವಾದಿ, ಜಾತ್ಯಾತೀತ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಬೇಕು. ಹಿಂದೂ ಮಠ ಮಾನ್ಯಗಳಿಗೆ ಅನುದಾನ ನೀಡಿದರೆ ಎಲ್ಲಿ ತನ್ನ ತುಷ್ಟೀಕರಣದ ಫಲಾನುಭವಿಗಳು ಮುನಿಯುತ್ತಾರೋ ಎಂಬುದು ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.
ನಿರಂತರವಾಗಿ ಮೂರೂಕಾಲು ಗಂಟೆ ಭಾಷಣ ಮಾಡಿದ ಸಿದ್ದರಾಮಯ್ಯನವರ ಬಜೆಟ್ ಒಂದು ರೀತಿ ಅಬ್ಬರದ ನಾಟಕದಂತಿತ್ತು. ಬಜೆಟ್ ಭಾಷಣವನ್ನೂ ಅವರು ಕೇಂದ್ರ ಸರ್ಕಾರವನ್ನು ದೂರಲು ಬಳಸಿದ್ದು ಅವರೊಬ್ಬ ಕೇವಲ ರಾಜಕಾರಣಿಯೇ ಹೊರತು ಮುತ್ಸದ್ದಿಯಲ್ಲ ಎಂಬುದನ್ನು ಸಾಬೀತುಪಡಿಸಿದೆ. ಕೇವಲ ಒಂದೊಂದು ಕೋಟಿಯ ಯೋಜನೆಗಳನ್ನೂ ಮಹಾನ್ ಸಾಧನೆ ಎಂಬಂತೆ ಬಿಂಬಿಸಲು ಹೊರಟಿದ್ದು ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. 3.71 ಲಕ್ಷ ಕೋಟಿ ರೂಪಾಯಿ ಬಜೆಟ್‌ನಲ್ಲಿ 1.05 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದು, ಇನ್ನೂ ಹುಟ್ಟಿರದ ಮುಂದಿನ ತಲೆಮಾರುಗಳ ಮೇಲೂ ಸಾಲದ ಹೊರೆ ಹೊರಿಸಿರುವುದು ಸಿದ್ದರಾಮಯ್ಯನವರ ಸಾಧನೆಯಾಗಿದೆ!
ಒಟ್ಟಾರೆಯಾಗಿ, ಈ ಬಾರಿಯ ಬಜೆಟ್ ರಾಜ್ಯವನ್ನು ಅಭಿವೃದ್ಧಿಯ ಹಾದಿಗೆ ಒಯ್ಯುವ ಬಜೆಟ್ ಆಗಿರದೆ, ದಶಕಗಳಷ್ಟು ಕಾಲ ಹಿಂದಕ್ಕೆ ತಳ್ಳಿರುವುದು ಕನ್ನಡಿಗರ ದುರದೃಷ್ಟವೇ ಸರಿ!