ಬೆಂಗಳೂರು : ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಯಲ್ಲಿರುವ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ, ನಿಮ್ಮ ದಮ್ಮು ತಾಖತ್ ತೋರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧವಿದ್ದರೆ ಬಿಜೆಪಿ ನಾಯಕರು ಅದನ್ನು ಕಂತುಗಳಲ್ಲಿ ಹೇಳುವುದನ್ನು ಬಿಟ್ಟು ನೇರವಾಗಿ, ಸ್ಪಷ್ಟವಾಗಿ ಹೇಳಿಬಿಡಬೇಕು. ಅದೇ ರೀತಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಜಾರಿಯಲ್ಲಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಾಗಿ ಆ ರಾಜ್ಯಗಳಲ್ಲಿ ಘೋಷಣೆ ಮಾಡಬೇಕು. ಈ ಮೂಲಕ ತಮ್ಮ ದಮ್ಮು ತಾಖತ್ ತೋರಿಸಬೇಕು. ಆಗಾಗ ಗೊಣಗಾಡಿಕೊಂಡರೆ ಏನು ಫಲ ಎಂದು ಹೇಳಿದ್ದಾರೆ.
ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿದೆ ಎಂದು ನಮ್ಮ ನಮ್ಮ ಸರ್ಕಾರದ ಬಗ್ಗೆ ಇರುವ ಈರ್ಷ್ಯೆಯನ್ನು ಹೊರಹಾಕಿದ್ದಾರೆ. ಇದು ಅಮಿತ್ ಶಾ ಅವರ ಖಚಿತ ಅಭಿಪ್ರಾಯವಾಗಿದ್ದರೆ ಅವರು ನನ್ನ ಜೊತೆ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳಲಿ, ಗ್ಯಾರಂಟಿ ಯೋಜನೆಗಳಿಂದ ನಮ್ಮ ಖಜಾನೆ ಬರಿದಾಗಿಲ್ಲ. ಬದಲಿಗೆ ತೆರಿಗೆ ಹಂಚಿಕೆ ಮತ್ತು ಅನುದಾನ ವಿತರಣೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎನ್ನುವುದನ್ನು ನಾನು ಸಾಬೀತು ಮಾಡಬಲ್ಲೆ. ಇದು ಅಮಿತ್ ಶಾ ಅವರಿಗೆ ನಾನು ಹಾಕುತ್ತಿರುವ ಸವಾಲು ಎಂದು ತಿಳಿಸಿದ್ಧಾರೆ.