ರಾಜಕೀಯರಾಜ್ಯಸುದ್ದಿ

FSL ರಿಪೋರ್ಟ್‌ ಬೋಗಸ್‌-ಬಿ ವೈ ವಿಜಯೇಂದ್ರ

ಬೆಂಗಳೂರು : ಬಾಂಬ್ ಸ್ಫೋಟ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವುದಿಲ್ಲ. ಒಂದು ಜವಾಬ್ದಾರಿಯುತ ವಿಪಕ್ಷವಾಗಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಕೊಡಲಿದ್ದೇವೆ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದರು. ಪಾಕಿಸ್ತಾನ್ ಪರ ಘೋಷಣೆ, FSL ವರದಿ ಬಂದಿದೆ. ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು ದೃಢಪಟ್ಟ ಮಾಹಿತಿ ನಮಗಿದೆ.ಆದ್ರೆ ಎಲ್ಲೋ ಒಂದು ಕಡೆ ಈ ರಾಜ್ಯ ಸರ್ಕಾರದ ವಿಳಂಬ ನೀತಿ ಮತ್ತು ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬಂತಿದೆ. ದೇಶದ್ರೋಹಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಬೋಗಸ್ ಎಫ್​ಎಸ್​ಎಲ್ ವರದಿ ತಯಾರಿಸುವ ಅನುಮಾನ ಕಾಡುವಂತಾಗಿದೆ ಎಂದರು.

ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ, ಸಚಿವರ ಹೇಳಿಕೆಗಳು ಕೇವಲ ಬಿಜೆಪಿ ಮಾತ್ರವಲ್ಲ, ಸಾಮಾನ್ಯ ಜನರಿಗೂ ವಿಶ್ವಾಸ ಹುಟ್ಟಿಸುವಂತಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶದ್ರೋಹಿಗಳ ಬಗ್ಗೆ ಸಚಿವರು ‘ಆ ರೀತಿ ಘೋಷಣೆ ಕೂಗಿಯೇ ಇಲ್ಲ’ ಎಂದಿದ್ದರು. ‘ಬಿಜೆಪಿಯವರಿಗೆ ಮಾಡುವುದಕ್ಕೆ ಕೆಲಸ ಇಲ್ಲ’ ಎಂದಿದ್ದರು. ವಿಧಾನಸೌಧಕ್ಕೆ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ವಿಡಿಯೋ ಗಮನಿಸಿ ಅರ್ಧ ಗಂಟೆಯಲ್ಲಿ ಅವರನ್ನೆಲ್ಲ ಹಿಡಿದು ಒಳಗೆ ಹಾಕಬೇಕಿತ್ತು. ಅದನ್ನೂ ಮಾಡಿಲ್ಲ ಎಂದು ವಿಜಯೇಂದ್ರ ಆಕ್ಷೇಪಿಸಿದರು. ಎಫ್​ಎಸ್​ಎಲ್ ವರದಿ ಗಮನಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಘಟನೆ ನಡೆದು ಕೆಲ ದಿನ ಕಳೆದಿದೆ. ಇವತ್ತಿಗೂ ಎಫ್​ಎಸ್​ಎಲ್ ವರದಿ ಬಂದಿಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ಎಫ್​ಎಸ್​ಎಲ್ ವರದಿ ಬಂದಿದೆ. ಪಾಕ್ ಪರ ಘೋಷಣೆ ಕೂಗಿರುವುದು ದೃಢವಾಗಿದೆ, ಇದರ ಮಧ್ಯೆ ಮುಖ್ಯಮಂತ್ರಿಗಳು ಎಫ್​ಎಸ್​ಎಲ್ ವರದಿ ಬಂದೇ ಇಲ್ಲ ಎಂದು ಮೈಸೂರಿನಲ್ಲಿ ಹೇಳಿದ್ದಾರೆ ಎಂದು ವಿವರಿಸಿದರು.

ರಾಜ್ಯದ ಜನರಲ್ಲೂ ಆತಂಕ ಕಾಡುತ್ತಿದೆ. ಇಂಥ ಘಟನೆಗಳನ್ನು ಎಷ್ಟು ಗಂಭೀರವಾಗಿ ರಾಜ್ಯ ಸರಕಾರ ತೆಗೆದುಕೊಳ್ಳಬೇಕೋ, ಇಂಥ ಘಟನೆ ನಡೆದಾಗ ಪೊಲೀಸ್ ಅಧಿಕಾರಿಗಳು ಎಷ್ಟು ಗಂಭೀರವಾಗಿ ವರ್ತಿಸಬೇಕೋ ಅಂಥ ಗಂಭೀರತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ ಎಂದು ವಿಜಯೇಂದ್ರ ಹೇಳಿದ್ರು. ಪಾಕಿಸ್ತಾನ ಪರ ಘಟನೆ ಕುರಿತು ನಿರ್ಧರಿಸಲು ಐದು ದಿನ ಬೇಕೇ?, ಇದು ನಾಚಿಕೆಗೇಡಿನ ಸಂಗತಿ ಅಲ್ಲವೇ ಎಂದು ಮರುಪ್ರಶ್ನೆ ಹಾಕಿದರು.ಹಾದಿ ಬೀದಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಲ್ಲ. ವಿಧಾನಸೌಧದಲ್ಲಿ ಕೂಗಿರುವಾಗ ದೇಶದ್ರೋಹಿಗಳನ್ನು ಬಂಧಿಸಿಲ್ಲವೆಂದರೆ ನಿಮ್ಮ ಇಚ್ಛಾಶಕ್ತಿ ಕೊರತೆಯೇ? ಅಥವಾ ದೇಶದ್ರೋಹಿಗಳನ್ನು ರಕ್ಷಿಸುವ ಪ್ರಯತ್ನದ ಜೊತೆಗೆ, ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ಆಗುವುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೇ? ಎಂಬುದು ಸ್ಪಷ್ಟವಾಗಿ ಹೇಳುವಂತೆ ಆಗ್ರಹಿಸಿದರು.ಮುಖ್ಯಮಂತ್ರಿಗಳು, ಸರ್ಕಾರ ಇಂಥ ಘಟನೆಗಳನ್ನು ಹೆಚ್ಚು ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಡದಂತೆ ನಿಲ್ಲಿಸಬೇಕು ಎಂದು ಅವರು ಕಳಕಳಿಯಿಂದ ಮನವಿ ಮಾಡುವುದಲ್ಲದೆ ಆಗ್ರಹಿಸುವುದಾಗಿಯೂ ಹೇಳಿದರು. ಏನೂ ಆಗಿಯೇ ಇಲ್ಲ ಎಂಬಂತೆ ಸಚಿವರು ಮನಸೋ ಇಚ್ಛೆ ಹೇಳಿಕೆ ಕೊಡುತ್ತಿದ್ದಾರೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

Comments (0)

Your email address will not be published. Required fields are marked *

Back to top button