ಶಿಕ್ಷಣಸುದ್ದಿ

5, 8, 9ನೇ ಪರೀಕ್ಷೆ: ಮತ್ತೆ ಸುಪ್ರೀಂ ಮೆಟ್ಟಿಲೇರುತ್ತಾ ರುಪ್ಸಾ

ಬೆಂಗಳೂರು: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ನಡೆಸುತ್ತಿರುವ 5, 8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ ಮತ್ತೆ ಕಂಟಕ ಎದುರಾಗಿದೆ. ಹಲವು ಸುತ್ತಿನ ಕಾನೂನು ಸಮರದ ಬಳಿಕ ಪಬ್ಲಿಕ್‌ ಪರೀಕ್ಷೆ ಮುಂದುವರಿಸಲು ರಾಜ್ಯ ಹೈಕೋರ್ಟ್‌ ಶುಕ್ರವಾರ ಬೆಳಗ್ಗೆ ಗ್ರೀನ್‌ ಸಿಗ್ನಲ್‌ ನೀಡಿತ್ತು.

ಇದೀಗ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ರುಪ್ಸಾ ಇದನ್ನು ಪ್ರಶ್ನಿಸಿ ಮತ್ತೆ ಸುಪ್ರೀಂಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದೆ. ಕಳೆದ ಬಾರಿ ವಿಚಾರಣೆ ನಡೆದಾಗ ಪರೀಕ್ಷೆಗೆ ತಡೆಯಾಜ್ಞೆ ನೀಡಿದ್ದ ಸುಪ್ರೀಂಕೋರ್ಟ್‌ ಏನು ಮಾಡಲಿದೆ ಎನ್ನುವುದರ ಆಧಾರದಲ್ಲಿ ಪರೀಕ್ಷೆ ಭವಿಷ್ಯ ನಿಂತಿದೆ.

ಶುಕ್ರವಾರ ಬೆಳಗ್ಗೆಯಷ್ಟೇ ಪಬ್ಲಿಕ್‌ ಪರೀಕ್ಷೆ ನಡೆಸುವ ಶಿಕ್ಷಣ ಇಲಾಖೆಯ ಸುತ್ತೋಲೆಯನ್ನು ರದ್ದುಗೊಳಿಸಿದ್ದ ವಿಭಾಗೀಯ ಪೀಠದ ಆದೇಶವನ್ನು ನ್ಯಾ. ಸೋಮಶೇಖರ್ ಹಾಗೂ ನ್ಯಾ.ರಾಜೇಶ್ ರೈ ಅವರನ್ನು ಒಳಗೊಂಡ, ಹೈಕೋರ್ಟ್ ವಿಭಾಗೀಯ ಪೀಠ ತಡೆ ಹಿಡಿದು ಬೋರ್ಡ್ ಎಕ್ಸಾಂಗೆ ಅಸ್ತು ಎಂದಿತ್ತು. ಸೋಮವಾರದಿಂದ ಪರೀಕ್ಷೆ ಮರು ಆರಂಭಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರ ಕೋರ್ಟ್‌ಗೆ ಹೇಳಿತ್ತು.

5, 8 ಮತ್ತು 9ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಸೋಮವಾರದಿಂದಲೇ ನಡೆಸುವ ಬಗ್ಗೆ ಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ. ಈಗಾಗಲೇ ಐದನೇ ತರಗತಿ ನಾಲ್ಕು ವಿಷಯಗಳ‌ ಪರೀಕ್ಷೆ ಮುಗಿದಿವೆ. 8 ಹಾಗೂ 9 ತಗರತಿಗಳ ಎರಡೆರಡು ವಿಷಯಗಳ ಪರೀಕ್ಷೆ ನಡೆದಿವೆ. 11ನೇ ತರಗತಿ ಎಲ್ಲಾ ವಿಷಯಗಳ‌ ಪರೀಕ್ಷೆ ಮುಕ್ತಾಯವಾಗಿದೆ.ಈ ನಡುವೆ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ನಿರ್ಧರಿಸಿದೆ.

ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ ತೃಪ್ತಿ ತಂದಿಲ್ಲ. ಎಂದು ಹೇಳಿರುವ RUPSA ಅಧ್ಯಕ್ಷ ಲೋಕೇಶ್ ತಾಳಿಕಟ್ಟಿ ಅವರು, ಈ ಬಾರಿ ನಡೆಯುತ್ತಿರುವ ಬೋರ್ಡ್ ಪರೀಕ್ಷೆಗಳನ್ನ ಮುಗಿಸಿ, ಮುಂದಿನ ವರ್ಷದಿಂದ ಸೂಕ್ತ ತೀರ್ಮಾನ ತೆಗೆದುಕೊಳ್ಳಿ ಎಂದು ವಿಭಾಗೀಯ ಪೀಠ ಹೇಳಿದೆ. ಆದರೆ ಈ ಬಾರಿ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಹೀಗಾಗಿ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದ್ದೇವೆ. ಸಾಕಷ್ಟು ಮಂದಿ ಪೋಷಕರು ಸಹ ಈ ಬಗ್ಗೆ ನಮಗೆ ಒತ್ತಾಯ ಮಾಡಿದ್ದಾರೆ ಎಂದು ಹೇಳಿದರು.

ರುಪ್ಸಾ ಈ ಹಿಂದೆ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದಾಗ ತಕ್ಷಣಕ್ಕೆ ತಡೆಯಾಜ್ಞೆ ಸಿಕ್ಕಿತ್ತು. ಆದರೆ, ಹೈಕೋರ್ಟ್‌ನಲ್ಲೇ ಮುಂದಿನ ವಿಚಾರಣೆ ನಡೆಯಬೇಕು ಎಂದು ಸೂಚಿಸಿತ್ತು. ಈಗ ಹೈಕೋರ್ಟ್‌ನ ತೀರ್ಮಾನವನ್ನು ಮತ್ತೆ ಪ್ರಶ್ನಿಸಿದಾಗ ಸುಪ್ರೀಂಕೋರ್ಟ್‌ ಏನು ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ.

Comments (0)

Your email address will not be published. Required fields are marked *

Back to top button