ಗದಗ ; ಗದಗ ನಗರದ ಹಳೆಯ ಡಿಸಿ ಸರ್ಕಲ್ ಬಳಿ, ರಸ್ತೆ ತಡೆದು ನೀರಿಗಾಗಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ನಗರದ ಸಿದ್ಧಾರ್ಥ್ ಬಡಾವಣೆಯ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದ್ದು, ತಿಂಗಳಿಗೊಮ್ಮೆ ನೀರು ಬಿಡುತ್ತಿದ್ದು, ಕಲುಷಿತ ನೀರು ಪೂರೈಕೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಳ್ಳುವಗಾಡಿಯಲ್ಲಿ ನೀರು ತರಬೇಕಾದ ಅನಿವಾರ್ಯತೆ ಎದುರಾಗಿದೆ. ನೀರಿಗಾಗಿ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿರುವ ಅಂಗನವಾಡಿಗೆ ಹೋಗಿ ನೀರು ತರಬೇಕಾಗಿದೆ. ಇದ್ರಿಂದ ಮಕ್ಕಳು ಹಾಗೂ ಮಹಿಳೆಯರು ಅನಾರೋಗ್ಯಕ್ಕೆ ಈಡಾಗಿದ್ದಾರೆ ಎಂದು ಪ್ರತಿಭಟನಾರರು ಆಕ್ರೋಶ ಹೊರಹಾಕಿದ್ದಾರೆ. ಸಂಭಾಪೂರ ರಸ್ತೆಯಲ್ಲಿರುವ ಸಿದ್ದಾರ್ಥ್ ಬಡಾವಣೆಯ 62 ಮನೆಗಳು ಸುಮಾರು 10 ವರ್ಷಗಳಿಂದ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ನಮ್ಮ ಗೋಳು ಯಾರೂ ಕೇಳ್ತಿಲ್ಲ. ಮೂಲ ಸೌಕರ್ಯ ವಂಚಿತ ಬಡಾವಣೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಶಾಸಕರು ಭೇಟಿ ಕೊಟ್ಟು ಸಮಸ್ಯೆಗೆ ಪರಿಹಾರ ನೀಡುವಂತೆ ಮಹಿಳೆಯರು ಪಟ್ಟು ಹಿಡಿದಿದ್ದಾರೆ.