ತುಮಕೂರು: ಸುಂಪಟದಿಂದ ವಜಾಗೊಂಡ ಬಳಿಕ 2 ದಿನಕಾಲ ಬೆಂಗಳೂರಿನಲ್ಲೇ ಇದ್ದ ಕೆ.ಎನ್ ರಾಜಣ್ಣ ಇಂದು ತುಮಕೂರಿನ ಮಧುಗಿರಿಗೆ ಭೇಟಿ ನೀಡಿದ್ರು. ಮಧುಗಿರಿಗೆ ಆಗಮಿಸಿದ ರಾಜಣ್ಣಗೆ ಗಡಿ ಕಾಟಗಾನಹಳ್ಳಿ ಬಳಿ ಅವರ ಬೆಂಬಲಿಗರು ಸ್ವಾಗತ ಕೋರಿದ್ರು. ಅಷ್ಟೇ ಅಲ್ಲದೇ ರಾಜಣ್ಣ ಪರ ಘೋಷಣೆ ಕೂಗಿದ್ರು. 79ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿಯಾಗಿದ್ರು.
ಧ್ವಜಾರೋಹಣ ಮಾಡಿ ಮಾತನಾಡಿದ ರಾಜಣ್ಣ ಮಂತ್ರಿ ಹೋಯ್ತು ಎನ್ನುವ ಬೇಸರ ನನಗಿಲ್ಲ ಎಂದು ಹೇಳಿದ್ದಾರೆ.ಅಧಿಕಾರ ಯಾರಿಗೂ ಶಾಶ್ವತವಲ್ಲ, ದೇವರಾಜ ಅರಸು ಅವರಿಗೂ ಕೂಡ ಇದೇ ಅನುಭವ ಆಗಿತ್ತು ಎಂದು ಹೇಳಿದ್ದಾರೆ.
ಸಚಿವನಾಗಿದ್ದರೆ ಹಾಸನದಲ್ಲಿ ಸೂಟು, ಬೂಟ ಹಾಕಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ. ಈಗ ನನಗೆ ಮತ್ತೆ ಸಾಮಾನ್ಯ ಮನುಷ್ಯನಾಗಿ ನಿಲ್ಲುವ ಅವಕಾಶ ಕಲ್ಪಿಸಿಕೊಟ್ಟಿದ್ದೀರಿ. ನಾನು ಅಧಿಕಾರಕ್ಕಾಗಿ ಅಂಟಿ ಕೂರುವವನಲ್ಲ. ನನಗೆ ಈ ಬಗ್ಗೆ ಯಾವುದೇ ಬೇಸರವಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.
ಇಲ್ಲಿಯವರೆಗೆ ಯಾವ ರಾಜಣ್ಣನಾಗಿ ಇದ್ನೋ ಅದೇ ರೀತಿ ಇನ್ನು ಮುಂದೆ ಹತ್ತು ಪಟ್ಟು ಹೆಚ್ಚಾಗಿರುತ್ತೇನೆ. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಯಾರೂ ಆಕ್ಷೇಪಣೆ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಪರ ರಾಜಣ್ಣ ಬ್ಯಾಟ್ ಬೀಸಿದ್ದಾರೆ.