ಮೈಸೂರು : ಮುಡಾ ಹಗರಣ ಹಗರಣ ಸಂಬಂಧ ಪಟ್ಟು ಬಿಡದೆ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರ ಸ್ನೇಹಮಯಿ ಕೃಷ್ಣ ಇದೀಗ ಮತ್ತೊಂದು ಮಹತ್ವದ ದಾಖಲೆ ಬಿಡುಗಡೆ ಮಾಡಿದ್ದಾರೆ. ಜತೆಗೆ, ಮುಡಾ ಅಕ್ರಮ ತನಿಖೆ ಮಾಡಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚಿಸಿರುವ ಆಯೋಗದ ಅಧ್ಯಕ್ಷರಾಗಿರುವ ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ಅದಕ್ಕೆ ಅರ್ಹರಲ್ಲ ಎಂದು ಪ್ರತಿಪಾದಿಸಿದ್ದಾರೆ. ಅದಕ್ಕೆ ಕಾರಣವೇನು ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಪಿಎನ್ ದೇಸಾಯಿ ಅವರನ್ನು ಸಿಎಟಿ ಸದಸ್ಯರನ್ನಾಗಿ ನೇಮಕ ಮಾಡಿ ಈ ಹಿಂದೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ವೈಯಕ್ತಿಕ ಕಾರಣದಿಂದ ಪಿಎನ್ ದೇಸಾಯಿ ಸದಸ್ಯತ್ವ ಒಪ್ಪಿರಲಿಲ್ಲ. ಆ ಸಂದರ್ಭದಲ್ಲಿ ಅವರ ಅರ್ಜಿಯಲ್ಲಿ ಹಲವು ನಿಬಂಧನೆಗಳಿಗೆ ಪಿಎನ್ ದೇಸಾಯಿ ಒಪ್ಪಿದ್ದರು.
ಪಿಎನ್ ದೇಸಾಯಿ ಒಪ್ಪಿದ್ದ ನಿಬಂಧನೆಗಳೇನು?
ನೇಮಕಾತಿ ಆದೇಶವನ್ನು ನಿರಾಕರಿಸದೇ ಇರುವುದು, ಆದೇಶ ಆದ 30 ದಿನಗಳ ಒಳಗಾಗಿ ಜವಾಬ್ದಾರಿ ಸ್ವೀಕರಿಸುವ ನಿಬಂಧನೆಗಳನ್ನು ಪಿಎನ್ ದೇಸಾಯಿ ಒಪ್ಪಿದ್ದರು. ಒಂದ ವೇಳೆ ನಿಬಂಧನೆಗಳನ್ನು ಉಲ್ಲಂಘಿಸಿದರೆ ಮೂರು ವರ್ಷಗಳ ಕಾಲ ಯಾವುದೇ ಆಯೋಗಕ್ಕೆ ನೇಮಕ ಮಾಡದಂತೆ ಡಿಬಾರ್ ಆಗಬಹುದು ಎಂಬ ನಿಬಂಧನೆಗೂ ಒಪ್ಪಿದ್ದರು. ಹೀಗಾಗಿ, ನಂತರದಲ್ಲಿ ಸಿಎಟಿ ಸದಸ್ಯತ್ವ ಒಪ್ಪದ ಕಾರಣ ಅವರನ್ನು ಮೂರು ವರ್ಷ ಶಾಸನಬದ್ಧ ಸಮಿತಿ, ಸ್ವಾಯತ್ತ ಸಮಿತಿ, ನಿಯಂತ್ರಕ ಸಮಿತಿಗೆ ನೇಮಕ ಮಾಡದಂತೆ ಆದೇಶ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಈ ವಿಚಾರ ಸಂಬಂಧ ಸ್ನೇಹಮಯಿ ಕೃಷ್ಣ ದಾಖಲೆ ಬಿಡುಗಡೆ ಮಾಡಿದ್ದಾರೆ.
ಮುಖ್ಯ ಕಾರ್ಯದರ್ಶಿಗೆ ಪತ್ರ
ಪಿಎನ್ ದೇಸಾಯಿ ವಿಚಾರವಾಗಿ ದಾಖಲೆ ಬಿಡುಗಡೆ ಮಾಡಿದ ಸ್ನೇಹಮಯಿಕೃಷ್ಣ, ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಶ್ರೀ ಪದ್ಮರಾಜ್ ನೇಮಚಂದ್ರ ದೇಸಾಯಿ (ಪಿ.ಎನ್.ದೇಸಾಯಿ) ಅವರನ್ನು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆ ಮಾಡಿರುವ ಏಕಸದಸ್ಯ ಆಯೋಗದ ಅಧ್ಯಕ್ಷರನ್ನಾಗಿ ಮಾಡಿರುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಪಿಎನ್ ದೇಸಾಯಿ ಅವರಿಗೆ ನೀಡಿರುವ ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು. ಅವರು ಆಯೋಗದ ಅಧ್ಯಕ್ಷರಾಗಲು ಅರ್ಹರಲ್ಲ ಎಂಬ ವಿಚಾರ ಗೊತಿದ್ದರೂ ಕೂಡ ಅವರು ಅಧ್ಯಕ್ಷರಾಗಿ ಮುಂದುವರೆದಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಭಾರತ ಸರ್ಕಾರಕ್ಕೆ ವರದಿಯನ್ನು ನೀಡಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸ್ನೇಹಮಯಿಕೃಷ್ಣ ಮನವಿ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.