ಮೈಸೂರು : ಹೆಚ್,ಡಿ,ಕುಮಾರಸ್ವಾಮಿ ಹಾಕಿದ್ದ ಕೇಸರಿ ಟವೆಲ್ ಬಿಜೆಪಿಯವರ ಟವಲ್ ಅಲ್ಲ . ಅದು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಾಗ ಒಬ್ಬ ಹುಡುಗ ಹಾಕಿದ ಟವೆಲ್, ಆಂಜನೇಯನ ಭಕ್ತ ನೀಡಿದ್ದ ಟವಲ್ ಎಂದು ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಹೆಚ್.ಡಿಕೆ ಕೇಸರಿ ಶಾಲು ಹಾಕಿದ ಬಗ್ಗೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿ ಬಹಿರಂಗವಾಗಿಯೇ ಆಕ್ಷೇಪಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿ, ಕುಮಾರಸ್ವಾಮಿ ಧರಿಸಿದ್ದ ಶಾಲು ಬಿಜೆಪಿಯವರದ್ದಲ್ಲ, ಆಂಜನೇಯನ ಭಕ್ತ ನೀಡಿದ ಶಾಲು. ಆದರೆ, ಕಾಂಗ್ರೆಸ್ ನವರು ಅದನ್ನೇ ದೊಡ್ಡದು ಮಾಡಿದ್ದಾರೆ ಅಷ್ಟೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಆಕ್ಷೇಪಕ್ಕೆ ಪರೋಕ್ಷ ಅಸಮ್ಮತಿ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣಾ ಹಿತದೃಷ್ಟಿಯಿಂದ ಮಾತ್ರವಷ್ಟೆ ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಅದನ್ನು ಹೊರತು ಪಡಿಸಿ ನಮ್ಮ ತತ್ವ ಸಿದ್ದಾಂತವೇ ಬೇರೆ ಬಿಜೆಪಿ ತತ್ವ ಸಿದ್ದಾಂತವೇ ಬೇರೆ ಎಂದರು.
ಜನತಾ ಪಕ್ಷ ಕಟ್ಟಿದ ಜಯ ಪ್ರಕಾಶ್ ನಾರಾಯಣ್, ಪಕ್ಷ ಉಳಿಸಿ ಬೆಳೆಸಿದ ಎಚ್.ಡಿ ದೇವೇಗೌಡರ ಹಾದಿಯಲ್ಲಿ ನಾವು ಸಾಗುತ್ತೇವೆ. ಮೈತ್ರಿ ಮಾಡಿಕೊಂಡಿರುವ ಮಾತ್ರಕ್ಕೆ ನಮ್ಮ ತತ್ವ ಸಿದ್ಧಾಂತ ಒಂದಿಂಚು ಕೂಡ ಬದಲಾಗಲ್ಲ. ಬಿಜೆಪಿಯವರದು ಅವರಿಗೆ ನಮ್ಮದು ನಮಗೆ. ಕೇವಲ ಚುನಾವಣಾ ದೃಷ್ಟಿಯಿಂದ ಮಾತ್ರ ನಾವು ಒಂದಾಗಿದ್ದೇವೆ ಎಂದು ಜಿಟಿ,ದೇವೇಗೌಡ ಹೇಳಿದರು.