ಬೆಂಗಳೂರು : ಜಾಗತಿಕವಾಗಿ ಉದ್ಯೋಗ ಮಾರುಕಟ್ಟೆ ಸ್ಥಿರವಾಗಿಲ್ಲ ಅನ್ನೋದಕ್ಕೆ ದಿನವೂ ಒಂದೊಂದು ಘಟನೆಯ ಬಗ್ಗೆ ಕೇಳುತ್ತಲೇ ಇರುತ್ತೇವೆ. ಅನೇಕ ಕಂಪನಿಗಳು ರಾತ್ರೋರಾತ್ರಿ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿವೆ . ಕೇವಲ ಐಟಿ ಮಾತ್ರವಲ್ಲ, ಬದಲಾಗಿ ಬೇರೆ ಬೇರೆ ಕಂಪನಿಗಳು ಬೇರೆ ಬೇರೆ ವಿಭಾಗದಲ್ಲಿರುವ ಅನೇಕ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಿರುವ ವರದಿಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಇದಕ್ಕೆ ವೆಚ್ಚ ಕಡಿತ ಸೇರಿದಂತೆ ಕಂಪನಿಯು ತನ್ನದೇ ಆದ ಕಾರಣಗಳನ್ನೂ ನೀಡುತ್ತದೆ. ಹಾಗೆಯೇ ಇತ್ತೀಚಿಗೆ ಅಮೆರಿಕದ ಕಂಪನಿಯೊಂದು ಒಂದೇ ಒಂದು ಕರೆಯೊಂದಿಗೆ ತನ್ನ 200 ಜನ ಉದ್ಯೋಗಿಗಳನ್ನು ವಜಾಗೊಳಿಸಿದೆ!
ಹೌದು, ಪ್ರಾಪ್ಟೆಕ್ ಸ್ಟಾರ್ಟ್ಅಪ್ ಫ್ರಂಟ್‌ಡೆಸ್ಕ್ ಎನ್ನುವ ಅಮೆರಿಕದ ಸ್ಟಾರ್ಟಪ್ ಕಂಪನಿ ಉದ್ಯೋಗಿಗಳ ಸಾಮೂಹಿಕ ವಜಾ ನಿರ್ಧಾರ ಕೈಗೊಂಡಿದ್ದು ಒಂದು ಕರೆಯೊಂದಿಗೆ ಅಷ್ಟೂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.
ಫ್ರಂಟ್‌ಡೆಸ್ಕ್, ಯುನೈಟೆಡ್ ಸ್ಟೇಟ್ಸ್‌ನಾದ್ಯಂತ 1,000 ಸುಸಜ್ಜಿತ ಅಪಾರ್ಟ್‌ಮೆಂಟ್‌ಗಳನ್ನು ನಿರ್ವಹಿಸುವ ಪ್ರಾಪ್‌ಟೆಕ್ ಸ್ಟಾರ್ಟ್‌ಅಪ್ ಆಗಿದೆ. ಕಳೆದ ಎರಡು ದಿನಗಳ ಹಿಂದೆ ಮಧ್ಯಾಹ್ನ “ಎರಡು ನಿಮಿಷಗಳ ಗೂಗಲ್ ಮೀಟ್ ಕರೆ” ಮೂಲಕ 200 ಜನರ ಸಂಪೂರ್ಣ ಉದ್ಯೋಗಿಗಳನ್ನು ವಜಾಗೊಳಿಸಿದೆ.