Top Newsರಾಜ್ಯಸುದ್ದಿ

ಪತ್ರಿಕೋದ್ಯಮದ ದ್ರೋಣಾಚಾರ್ಯ ನಿಧನ; ಹಿರಿಯ ಪತ್ರಕರ್ತನ ಪಯಣ ಅಂತ್ಯ

ಕರ್ನಾಟಕದ ಹಿರಿಯ ಪತ್ರಕರ್ತರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಿ. ರಾಮಯ್ಯ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 93 ವರ್ಷ ವಯಸ್ಸಿನ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಡಾ. ಬಾಲಾಜಿ ತಿಳಿಸಿದ್ದಾರೆ.

1933 ಸೆಪ್ಟೆಂಬರ್ 12ರಂದು ಜನಿಸಿದ ರಾಮಯ್ಯ ಅವರು ‘ದಿ ಹಿಂದೂ’ ಪತ್ರಿಕೆಯಲ್ಲಿ ಸುಮಾರು 45 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು. ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಇವರನ್ನು ಸತ್ಯ ಮತ್ತು ಪ್ರಾಮಾಣಿಕತೆಯ ಬದ್ಧತೆಗಾಗಿ ‘ಪತ್ರಿಕೋದ್ಯಮದ ತಪಸ್ವಿ’ ಎಂದು ಕರೆಯಲಾಗುತ್ತಿತ್ತು. ಪತ್ರಿಕೋದ್ಯಮದ ಜೊತೆಗೆ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಅವರು ನಾಡಿನ ಸೇವೆ ಮಾಡಿದ್ದರು. ಅವರ ಅನುಭವ ಕಥನವಾದ “ನಾನು ಹಿಂದೂ ರಾಮಯ್ಯ” ಕೃತಿಯು ಇಂದಿನ ತಲೆಮಾರಿನ ಪತ್ರಕರ್ತರಿಗೆ ದೊಡ್ಡ ಪ್ರೇರಣೆಯಾಗಿದೆ.

ಪಿ. ರಾಮಯ್ಯ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಆದಿಚುಂಚನಗಿರಿ ಮಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ತೀವ್ರ ಶೋಕ ವ್ಯಕ್ತಪಡಿಸಿ ಪತ್ರಿಕೋದ್ಯಮಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.

ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು ಇವರಿಗೆ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಇದರೊಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮತ್ತು ಕೆಂಪೇಗೌಡ ಪ್ರಶಸ್ತಿಗಳಿಗೂ ಇವರು ಭಾಜನರಾಗಿದ್ದರು. ಪತ್ರಿಕಾ ಅಕಾಡೆಮಿ ಮತ್ತು ವಿವಿಧ ಪತ್ರಕರ್ತ ಕಲ್ಯಾಣ ಸಮಿತಿಗಳಲ್ಲಿ ಸಕ್ರಿಯ ಸದಸ್ಯರಾಗಿ ಕೆಲಸ ಮಾಡಿದ್ದರು.ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಂದು ಬೆಳಿಗ್ಗೆ 9 ಗಂಟೆಯಿಂದ ಸದಾಶಿವನಗರದ ಅವರ ನಿವಾಸದಲ್ಲಿಇರಿಸಲಾಗುವುದು ಎಂದು ಅವರ ಸೋದರಳಿಯ ಗಿರೀಶ್ ಲಿಂಗಣ್ಣ ಅವರು ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button