ಮಂಡ್ಯ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ‘ಜನಾಕ್ರೋಶ ಯಾತ್ರೆ’ಯು ಮಂಡ್ಯ ನಗರದ ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮಹಾವೀರ ಸರ್ಕಲ್ವರೆಗೆ ಇಂದು ನಡೆಯಿತು. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಯಾತ್ರೆಯಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.
ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕಾಂಗ್ರೆಸ್‌ನ ಜನವಿರೋಧಿ ನೀತಿಯ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ. ಜನಪರ ಆಡಳಿತ, ನಮ್ಮ ನೀರು ನಮ್ಮ ಹಕ್ಕು ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ದುರಾಡಳಿತ ನಡೆಸುತ್ತಿದೆ. ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಅವರು ಅದೇ ವರ್ಗವನ್ನು ಮರೆತಿದ್ದಾರೆ ಎಂದು ಆಪಾದಿಸಿದರು.
ಜನರು ನೀರು, ವಿದ್ಯುತ್ಗಾಗಿ ಪರಿತಪಿಸಬೇಕಿದೆ. ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲು ತಂದಿದ್ದಾರೆ. ಕನ್ನಂಬಾಡಿ ಕಟ್ಟಲು ರಾಜರು ಮನೆಯ ಒಡವೆ ಅಡವಿಟ್ಟರು. ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ನಾಲೆಗಳ ಕೆಲಸ ಮಾಡಿಸಲಿಲ್ಲ. ಅಭಿವೃದ್ಧಿಗೆ ಹಣ ಕೊಡಲು ಸಾಧ್ಯವಾಗ್ತಿಲ್ಲ. ಇದು ರಾಜ್ಯದ ಆರ್ಥಿಕ ದುಸ್ಥಿತಿಗೆ ಉದಾಹರಣೆ ಎಂದು ಟೀಕಿಸಿದರು.