ಬಾಗಲಕೋಟೆ : ದೇಶ ಸೇವೆಯ ಕನಸು ಹೊತ್ತು ಭಾರತೀಯ ಸೇನೆಗೆ ಸೇರಿದ್ದರು. ಹಿಮಾಚಲ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಯೋಧನಿಗೆ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆ ಆಗಿತ್ತು. ವರ್ಗಾವಣೆ ಬಳಿಕ ಜೊತೆಗೆ ಇದ್ದ ಪತ್ನಿಯನ್ನು ಊರಿಗೆ ಕಳಿಸಿ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಪತ್ನಿ ಬೆಳಿಗ್ಗೆಯಷ್ಟೇ ಮನೆಗೆ ಬಂದು ಸೇರಿದರೆ ಸಂಜೆ ವೇಳೆಗೆ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ 25 ವರ್ಷದ ಮಹೇಶ್ ನಾಗಪ್ಪ ಮರಿಗೊಂಡ 11ನೇ ಮರಾಠಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೇನೆಗೆ ಸೇರಿ 6 ವರ್ಷ 6 ತಿಂಗಳು ಆಗಿತ್ತು. ಮಹೇಶ್ ಅವರು ಮೂರು ವರ್ಷದ ಹಿಂದೆ ಲಕ್ಷ್ಮೀ ಅವರ ಕೈ ಹಿಡಿದಿದ್ದರು. ಮಂಗಳವಾರ ಬೆಳಗ್ಗೆ ಲಕ್ಷ್ಮೀ ಅವರು ಮಹಾಲಿಂಗಪುರಕ್ಕೆ ಬಂದಿದ್ದಾರೆ. ಆ ಬಳಿಕ ಪೋನ್‌ನಲ್ಲಿ ಮಹೇಶ್ ಜೊತೆ ಮಾತನಾಡಿದ್ದಾರೆ. ಆದರೆ ಸಂಜೆ ವಾಹನದೊಂದಿಗೆ ಪ್ರಪಾತಕ್ಕೆ ಬಿದ್ದು ಯೋಧ ಮಹೇಶ್ ಹುತಾತ್ಮರಾಗಿದ್ದಾರೆ.