ನಮ್ಮ ಸರ್ಕಾರ ಬಿದ್ದೋಗತ್ತೆ ಅಂತ ಸೋತ ಗಿರಾಕಿಗಳು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಐದು ವರ್ಷ ಬಂಡೆ ರೀತಿ ಇರತ್ತೆ. 2028 ರಲ್ಲೂ ನಾವೇ ಗೆದ್ದು ಅಧಿಕಾರಕ್ಕೆ ಬರ್ತೀವಿ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಸೋತ ಗಿರಾಕಿಗಳು ಸರ್ಕಾರ ಬಿದ್ದೋಗುತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನಗೂ , DCM ಶಿವಕುಮಾರ್ ಅವರಿಗೂ ಸರಿ ಇಲ್ಲ ಎಂದು ಬುರುಡೆ ಬಿಡುತ್ತಿದ್ದಾರೆ. ನಾನು ಮತ್ತು ಶಿವಕುಮಾರ್ ಇಬ್ಬರೂ ಒಟ್ಟಾಗಿ, ಗಟ್ಟಿಯಾಗಿದ್ದೀವಿ. ನಮ್ಮ ಸರ್ಕಾರವೂ ಐದು ವರ್ಷ ಗ್ಯಾರಂಟಿಯಾಗಿ ಗಟ್ಟಿಯಾಗಿ ಇರುತ್ತದೆ. 2028 ರಲ್ಲೂ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಭಿವೃದ್ಧಿಗೆ ಹಣ ಇಲ್ಲ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬುರುಡೆ ಬಿಡುತ್ತಿರುವ ಬಿಜೆಪಿಯವರು ನಾಡಿನ ಜನರಿಗೆ ಉತ್ತರಿಸಬೇಕು. ದಿವಾಳಿ ಆಗಿದ್ದರೆ 25 ಸಾವಿರ ಕೋಟಿ ರೂಪಾಯಿ ಎಲ್ಲಿಂದ ಬಂತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸುಳ್ಳು ಹೇಳುವ ಚಾಳಿಯಲ್ಲಿರುವ ಬಿಜೆಪಿ ಗೆ ರಾಜ್ಯದ ಜನ ಪೂರ್ಣ ಅಧಿಕಾರವನ್ನೇ ಕೊಟ್ಟಿಲ್ಲ. ಆಪರೇಷನ್ ಕಮಲ ಮಾಡಿ ಎರಡು ಬಾರಿ ಅಧಿಕಾರಕ್ಕೆ ಬಂದರು. ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕಿಕೊಂಡೇ ಅಧಿಕಾರಕ್ಕೆ ಬರಬೇಕು. ಸ್ವಂತ ಶಕ್ತಿಯಿಂದ ಸಾಧ್ಯವೇ ಇಲ್ಲ ಎಂದರು.
ನಾನು ಸುಳ್ಳು ಹೇಳಿದ್ರೆ ಜನರಿಗೆ ಗೊತ್ತಾಗಲ್ವಾ ? ಅದಕ್ಕೇ ಬಿಜೆಪಿ, ಜೆಡಿಎಸ್ ನವರು ಜನರನ್ನು ದಡ್ಡರೆಂದು ಭಾವಿಸಬಾರದು. ಜನರಿಗೆ ಸುಳ್ಳು ಹೇಳಿ ಹೋಗಬಾರದು ಎಂದರು.