ಲೋಕಾಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಬಿಜೆಪಿ ಪಾಳೆಯದಲ್ಲಿ ಟಿಕೆಟ್ ಅಕ್ಷಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ಗೆ ದಿನಕ್ಕೆ ಒಬ್ಬರಂತೆ ಬೇಡಿಕೆ ಇಡುತ್ತಿದ್ದು ಅಕ್ಷಾಂಕ್ಷಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ.
ಬೀದರ್ ರಾಜಕೀಯ ಪಡಸಾಲೆಯಲ್ಲಿ ಏನ್ನಾಗುತ್ತಿದೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಗಡಿ ಜಿಲ್ಲೆ ಬೀದರ್ ಕಳೆದ ಒಂದು ದಶಕದಿಂದ ಬಿಜೆಪಿಯ ಭದ್ರಕೋಟೆ ಎಂದು ಗುರುತಿಸಿಕೊಂಡಿದೆ. ಆದರೂ ಕೂಡ ಕೇಂದ್ರ ಸಚಿವ ಹಾಗೂ ಹಾಲಿ ಬೀದರ್ ಸಂಸದ ಭಗವಂತ ಖೂಬಾಗೆ ಸ್ವಪಕ್ಷದವರಿಂದಲೇ ಭಾರಿ ಕಂಟಕ ಶುರುವಾಗಿದ್ದು, ಬಿಜೆಪಿಯಲ್ಲಿ ದಿನೇ ದಿನೇ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಇತ್ತೀಚಿಗೆ ಮಾಧ್ಯಮಗೋಷ್ಠಿ ನಡೆಸಿದ ಹುಮನಬಾದ್ ನ ಮಾಜಿ ಶಾಸಕ ಸುಭಾಷ್ ಕಲ್ಲೂರು ಮತ್ತು 2023ರ ವಿಧಾನ ಸಭಾ ಚುನಾವಣೆಯ ಬೀದರ್ ಉತ್ತರ ಕ್ಷೇತ್ರದ ಟಿಕೆಟ್ ಅಕ್ಷಾಂಕ್ಷಿ ಗುರುನಾಥ ಕೊಳ್ಳುರ ಹಾಗೂ ಹಾವಗಿ ಮಠದ ಶಂಭು ಲಿಂಗ ಶ್ರೀಗಳು ಕೂಡ ಪಕ್ಷದ ಹೈ ಕಮಾಂಡ್ ಮನವೊಲಿಸುವ ಪ್ಲಾನ್ ಮಾಡುತ್ತಿದ್ದಾರೆ.
ಇನ್ನು ತವರು ಕ್ಷೇತ್ರ ಔರಾದ್ ನಲ್ಲಿ ಖೂಬಾ ಅಪ್ತರಿಂದ ಪಕ್ಷ ವಿರೋಧಿ ಚಟುವಟಿಕೆ ನಡೆಯುತ್ತಿದೆ. ಮಾಜಿ ಸಚಿವ ಪ್ರಭು ಚವ್ಹಾಣ್ ಮತ್ತು ಶಾಸಕ ಶರಣು ಸಲಗಾರ ಜೊತೆ ಕೇಂದ್ರ ಸಚಿವರ ವೈ ಮನಸ್ಸು ಇದೆ.
ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಔರಾದ್ ಮತ ಕ್ಷೇತ್ರದಲ್ಲಿ ಶಾಸಕ ಪ್ರಭು ಚವ್ಹಾಣ್ ಅವರ ಟಿಕೆಟ್ ತಪ್ಪಿಸಲು ಹಾಗೂ ಚುನಾವಣೆಯಲ್ಲಿ ಸೋಲಿಸಲು ಖೂಬಾ ಅಪ್ತರಿಂದ ಭಾರಿ ಕಸರತ್ತು ನಡೆದಿತ್ತು. ಇದರ ಹಿನ್ನಲೆ ಚುನಾವಣೆಯ ಗೆಲುವಿನ ನಂತರ ಕಣ್ಣೀರ್ ಹಾಕುತ್ತಾ ಖೂಬಾ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಅದೇ ರೀತಿ ಬಸವಕಲ್ಯಾಣ ಶಾಸಕ ಶರಣು ಸಲಗಾರ ಕೂಡ ಖೂಬಾ ಮೇಲೆ ಮುನಿಸಿಕೊಂಡಿದ್ದು ಮರಾಠ ಸಮಾಜದ ನಾಯಕರಿಗೆ ಟಿಕೆಟ್ ನೀಡುವಂತೆ ಬಹಿರಂಗವಾಗಿ ಹೇಳಿಕೆ ನೀಡುತ್ತಾ ಖೂಬಾ ವಿರುದ್ಧ ಷಡ್ಯಂತ್ರ ಹೂಡುತ್ತಿದ್ದಾರೆ.
ಲೋಕ ಸಮರಕ್ಕೆ ದೇಶದಲ್ಲಿ ಆಯಾ ರಾಜಕೀಯ ಪಕ್ಷಗಳು ಸಮೀಕರಣ ಸಿದ್ದಪಡಿಸಿಕೊಳ್ಳುತ್ತಿದ್ದು, ಬಿಜೆಪಿ ಪಕ್ಷ ಕೂಡ ಗೆಲ್ಲುವ ಕುದುರೆಗಳಿಗೆ ಮಣೆ ಹಾಕುವ ಪ್ಲಾನ್ ಮಾಡುತ್ತಿದ್ದು ಸ್ವ ಪಕ್ಷದ ಶಾಸಕರು ಮತ್ತು ಹಿರಿಯರ ಕೆಂಗಣ್ಣಿಗೆ ಗುರಿಯಾಗಿರುವ ಖೂಬಾ ಗೆ ಈ ಬಾರಿ ಲೋಕಸಭಾ ಟಿಕೆಟ್ ಸಿಗುತ್ತಾ ಅಥವಾ ಹೊಸಬರಿಗೆ ಮಣೆ ಹಾಕುತ್ತಾರಾ ಕಾದು ನೋಡಬೇಕಾಗಿದೆ.
ಈಗಾಗಾಲೇ ವಿವಿಧ ಮಠಾಧೀಶರು, ಜಿಲ್ಲೆಯ ಪ್ರಮುಖ ನಾಯಕರು ಗುರುನಾಥ ಕೊಳ್ಳೂರರಿಗೆ ಬೆಂಬಲ ಸೂಚಿಸಿದ್ದು, ಟಿಕೆಟ್ ನೀಡಿದ್ರೆ ಗೆಲ್ಲುತ್ತೇನೆ ಎಂದು ಗುರುನಾಥ್ ಕೊಳ್ಳೂರ್ ಫುಲ್ ಜೋಶ್ ನಲ್ಲಿದ್ದಾರೆ. ಒಟ್ಟಾರೆ ಈ ಬಾರಿಯ ಲೋಕಸಭಾ ಟಿಕೆಟ್ ಮೇಲೆ ಹಲವರು ಕಣ್ಣಿಟ್ಟಿದ್ದು, ಖೂಬಾ ಕೂಡ ತನ್ನದೇ ಅದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಹೈ ಕಮಂಡ್ ನಿಲುವೇನು ಅನ್ನೋದನ್ನ ಕಾದು ನೋಡಬೇಕು.