ಬೆಂಗಳೂರು: ಸುರಂಗ ರಸ್ತೆ ಯೋಜನೆ ವಿಚಾರ ಬಿಜೆಪಿ, ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.. ವಿಪಕ್ಷ ನಾಯಕ ಆರ್ ಅಶೋಕ್ ಅವರು ಟನಲ್ ರಸ್ತೆ ವಿಚಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುರಂಗ ರಸ್ತೆಗೂ ನಿಮ್ಮ ಮುಖ್ಯಮಂತ್ರಿ ಹುದ್ದೆ ಕನಸಿಗೂ ಸಂಬಂಧವಿದೆಯಾ? ಎಂದು ಅಶೋಕ್ ಅವರು, ಡಿಕೆ ಶಿವಕುಮಾರ್ ಅವರಿಗೆ ಪ್ರಶ್ನಿಸಿದ್ದಾರೆ.. ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇಷ್ಟೆಲ್ಲ ಬಾಧಕಗಳಿರುವ ಸುರಂಗ ರಸ್ತೆಯನ್ನು ಮಾಡಿಯೇ ತೀರುತ್ತೇನೆ ಎನ್ನುವ ಹಠಕ್ಕೆ ಯಾಕೆ ಬಿದ್ದಿದ್ದೀರಿ? ಐಐಎಸ್ಸಿ ಅಧ್ಯಯನ ವರದಿ, ವಿಜ್ಞಾನಿಗಳು, ಪರಿಸರ ತಜ್ಞರು, ಪರಿಸರವಾದಿಗಳು, ನಾಗರೀಕರು ಎಷ್ಟೇ ವಿರೋಧ ಮಾಡುತ್ತಿದ್ದರೂ ಸುರಂಗ ರಸ್ತೆ ಬಗ್ಗೆ ನಿಮಗೆ ಅಷ್ಟು ಅಚಲ ಆಸಕ್ತಿ ಯಾಕೆ? ಎಂದು ಕೇಳಿದ್ದಾರೆ.
ವೈಯಕ್ತಿಕ ಪ್ರತಿಷ್ಠೆ, ಹಠಕ್ಕಾಗಿ ಬೆಂಗಳೂರಿನ ಪರಿಸರಕ್ಕೆ ದೀರ್ಘಕಾಲೀನ ಅಪಾಯ ತಂದೊಡ್ಡುವ ಅವೈಜ್ಞಾನಿಕ ಯೋಜನೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ರೀತಿ ಯೋಜನೆಯನ್ನು ಹೇರಿ ಬೆಂಗಳೂರಿನ ವಿಲನ್ ಆಗಬೇಡಿ’ ಎಂದು ಹೇಳಿದ್ದಾರೆ. ಸುರಂಗ ರಸ್ತೆ ಯೋಜನೆಯಿಂದ ಜಲಮೂಲ, ಅಂತರ್ಜಲ, ಕೊಳವೆ ಬಾವಿಗೆ ಧಕ್ಕೆಯಾಗಲಿದೆ. ನಗರದ ಪರಿಸರಕ್ಕೆ ದೊಡ್ಡಮಟ್ಟದ ಹೊಡೆತ ಬೀಳಲಿದೆ. ಲಾಲ್‌ಬಾಗ್, ಕಬ್ಬನ್ ಪಾರ್ಕ್‌ನಂತಹ ನಗರದ ಶ್ವಾಸಕೋಶಗಳಿಗೆ ಹಾನಿಯಾಗಲಿದೆ. ಟ್ರಾಫಿಕ್ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಅಲ್ಲ’ ಎಂದು ಅಶೋಕ ಅವರು ಉಲ್ಲೇಖಿಸಿದ್ದಾರೆ.


