
ತುಮಕೂರು: ಕುಣಿಗಲ್ ತಾಲೂಕಿನ ಸಂತೆ ಮಾವತ್ತೂರು ಸೊಸೈಟಿ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಈ ಪ್ರಕರಣದ ಹಿಂದೆ ಶಾಸಕ ಡಾ. ರಂಗನಾಥ್ ಅವರ ಕೈವಾಡವಿದೆ ಎಂದು ಗಂಭೀರವಾಗಿ ದೂರಿದ್ದಾರೆ.
ಚುನಾವಣಾ ಅಧಿಕಾರಿಯೇ ಬ್ಯಾಲೆಟ್ ಪೇಪರ್‌ಗಳಿಗೆ ಮುದ್ರೆಯೊತ್ತಿ ಮತ ಪೆಟ್ಟಿಗೆಗೆ ಹಾಕುತ್ತಿದ್ದಾಗ ನಮ್ಮ ಏಜೆಂಟ್‌ಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆದರೆ, ಪೊಲೀಸರು ಅಕ್ರಮ ಎಸಗಿದ ಅಧಿಕಾರಿಯನ್ನು ಬಂಧಿಸುವ ಬದಲು ಎಸ್ಕೇಪ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಕ್ರಮವನ್ನು ಪತ್ತೆ ಹಚ್ಚಿ ಹಿಡಿದುಕೊಟ್ಟವರ ಮೇಲೆಯೇ ಎಫ್‌ಐಆರ್ ದಾಖಲಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿರುವ ಅವರು, ಇದು ಕಾಂಗ್ರೆಸ್ ಸರ್ಕಾರದ ಹತಾಶೆಯ ಪರಮಾವಧಿ ಎಂದು ಟೀಕಿಸಿದ್ದಾರೆ. “ಮಾಲ್ಪ್ರಾಕ್ಟೀಸ್ ಮಾಡುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಮತ್ತು ಅನ್ಯಾಯವಾಗಿ ದಾಖಲಿಸಿರುವ ಕೇಸ್ ಅನ್ನು ಹಿಂಪಡೆಯಬೇಕು” ಇಲ್ಲವಾದಲ್ಲಿ ಈ ವಿಚಾರವನ್ನು ಮುಂಬರುವ ಸದನದಲ್ಲಿ ಪ್ರಸ್ತಾಪಿಸಿ ರಾಜ್ಯಾದ್ಯಂತ ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬ್ಯಾಲೆಟ್ ಪೇಪರ್ ಚುನಾವಣೆಗಳಲ್ಲಿ ಕಾಂಗ್ರೆಸ್ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಶಾಸಕ ರಂಗನಾಥ್ ಅವರನ್ನು ಕೂಡಲೇ ಬಂಧಿಸಬೇಕು ಎಂಬ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಯು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.




