
ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಆರಂಭವಾಗಿ ಹದಿನಾಲ್ಕು ದಿನಗಳು ಕಳೆದರೂ ಕದನ ವಿರಾಮದ ಲಕ್ಷಣಗಳು ಕಾಣುತ್ತಿಲ್ಲ. ಈ ಯುದ್ಧದ ಕಾರ್ಮೋಡ ನೇರವಾಗಿ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಅಪ್ಪಳಿಸಿದೆ. ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮಕ್ಕೆ ಈ ಬೆಳವಣಿಗೆ ಬಹುದೊಡ್ಡ ಹೊಡೆತ ನೀಡಿದೆ. ವಿದೇಶಗಳಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕುಸಿದಿರುವುದು ಒಂದೆಡೆಯಾದರೆ, ಇಲ್ಲಿಂದ ವಿದೇಶ ಪ್ರವಾಸಕ್ಕೆ ಯೋಜಿಸಿದ್ದವರು ತಮ್ಮ ಪ್ರಯಾಣವನ್ನು ರದ್ದುಗೊಳಿಸುತ್ತಿರುವುದು ಆತಂಕ ಮೂಡಿಸಿದೆ.

ಮಧ್ಯಪ್ರಾಚ್ಯದ ಈ ಅಸ್ಥಿರತೆಯಿಂದಾಗಿ ಗಲ್ಫ್ ರಾಷ್ಟ್ರಗಳ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಕತಾರ್, ಎಮಿರೇಟ್ಸ್, ಒಮನ್ ಏರ್ಲೈನ್ ಮತ್ತು ಏರ್ ಅರೇಬಿಯಾದಂತಹ ಫ್ಲೈಟ್ಗಳ ಸಂಚಾರದಲ್ಲಿ ಏರುಪೇರಾಗಿದೆ. ಈ ಮೊದಲು ಪ್ರತಿದಿನ ಸುಮಾರು 5,000 ಪ್ರವಾಸಿಗರು ಈ ವಿಮಾನಗಳ ಮೂಲಕ ಬೆಂಗಳೂರಿಗೆ ಬರುತ್ತಿದ್ದರು. ಆದರೆ ಮಾರ್ಚ್ ತಿಂಗಳ ಆರಂಭದಿಂದಲೇ ವಿಮಾನಗಳ ರದ್ದತಿ ಹೆಚ್ಚಾಗಿದ್ದು, ಶೇಕಡಾ 50 ರಿಂದ 60 ರಷ್ಟು ವಿದೇಶಿಗರು ತಮ್ಮ ಬುಕ್ಕಿಂಗ್ ಹಣವನ್ನು ವಾಪಸ್ ಕೇಳುತ್ತಿದ್ದಾರೆ. ಇದರಿಂದಾಗಿ ನಗರದ ಪ್ರತಿಷ್ಠಿತ ಹೋಟೆಲ್ಗಳ ಶೇಕಡಾ 50 ರಷ್ಟು ಕೊಠಡಿಗಳು ಅತಿಥಿಗಳಿಲ್ಲದೆ ಖಾಲಿಯಾಗಿವೆ.

ಬೆಂಗಳೂರಿಗರು ಕೂಡ ಯುದ್ಧದ ಭೀತಿಯಿಂದಾಗಿ ತಮ್ಮ ವಿದೇಶಿ ಪ್ರವಾಸದ ಪ್ಲಾನ್ ಕೈಬಿಡುತ್ತಿದ್ದಾರೆ. ರಂಜಾನ್ ಹಬ್ಬದ ಪ್ರಯುಕ್ತ ದುಬೈ ಮತ್ತು ಸೌದಿ ಅರೇಬಿಯಾಕ್ಕೆ ತೆರಳಬೇಕಿದ್ದವರು ಹಾಗೂ ಬೇಸಿಗೆ ರಜೆಯಲ್ಲಿ ಯುರೋಪ್ ಪ್ರವಾಸಕ್ಕೆ ಸಜ್ಜಾಗಿದ್ದವರು ಈಗ ಹಿಂದೆ ಸರಿಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ವಿಮಾನಯಾನ ದರ ಏರಿಕೆ. ಸದ್ಯ ಬೆಂಗಳೂರಿನಿಂದ ಲಂಡನ್ನಂತಹ ನಗರಗಳಿಗೆ ಟಿಕೆಟ್ ದರ ಒಂದು ಲಕ್ಷ ರೂಪಾಯಿ ದಾಟಿದೆ. ಕೊರೊನಾ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿದ್ದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಈಗ ಗಲ್ಫ್ ಯುದ್ಧ ಮತ್ತೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.




