
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕದ ದಾಳಿಗಳಿಂದ ಉಂಟಾಗಿರುವ ಬಿಕ್ಕಟ್ಟಿನ ನಡುವೆಯೇ, ಇರಾನ್ ತನ್ನ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಬದಲಾವಣೆ ಮಾಡಿದೆ. ದೀರ್ಘಕಾಲದ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮರಣದ ನಂತರ, ಅವರ ದ್ವಿತೀಯ ಪುತ್ರ 56 ವರ್ಷದ ಮೊಜ್ತಬಾ ಖಮೇನಿ ಅವರನ್ನು ಇರಾನ್‌ನ ನೂತನ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇರಾನ್‌ನ ಅತ್ಯುನ್ನತ ನಿರ್ಧಾರಗಳನ್ನು ಕೈಗೊಳ್ಳುವ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ಸಭೆ ಸೇರಿ ಈ ನಿರ್ಧಾರವನ್ನು ಕೈಗೊಂಡಿದೆ. ಇತ್ತೀಚೆಗಿನ ದಾಳಿಗಳ ಸಂದರ್ಭದಲ್ಲಿ ಉಂಟಾದ ಗೊಂದಲದ ಸಮಯದಲ್ಲಿ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ ಅವರನ್ನು ಮಧ್ಯಂತರ ಸರ್ವೋಚ್ಚ ನಾಯಕನನ್ನಾಗಿ ನೇಮಿಸಲಾಗಿತ್ತು. ಆದರೆ, ಈಗ ದೇಶವನ್ನು ದೀರ್ಘಕಾಲದವರೆಗೆ ಮುನ್ನಡೆಸಲು ಮತ್ತು ರಕ್ಷಣಾ ಪಡೆಗಳ ಮೇಲೆ ಹಿಡಿತ ಸಾಧಿಸಲು ಮೊಜ್ತಬಾ ಅವರನ್ನೇ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಕ್ರಾಂತಿಕಾರಿ ಪಡೆಗಳ ಒತ್ತಡದ ಮೇರೆಗೆ ಈ ನೇಮಕಾತಿ ನಡೆದಿದೆ ಎನ್ನಲಾಗುತ್ತಿದ್ದು, ಇದು ಇರಾನ್‌ನ ಇತಿಹಾಸದಲ್ಲಿ ವಂಶಪಾರಂಪರ್ಯ ಆಡಳಿತದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.
ಮೊಜ್ತಬಾ ಖಮೇನಿ ಅವರು ಕಳೆದ ಎರಡು ದಶಕಗಳಿಂದ ತಮ್ಮ ತಂದೆಯ ನೆರಳಿನಂತೆ ಕೆಲಸ ಮಾಡುತ್ತಾ, ಇರಾನ್‌ನ ಗುಪ್ತಚರ ಮತ್ತು ಮಿಲಿಟರಿ ವಿಭಾಗಗಳಲ್ಲಿ ಪ್ರಬಲ ಹಿಡಿತ ಹೊಂದಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಇರಾನ್ ತನ್ನ ಹಳೆಯ ಕಠಿಣ ನಿಲುವನ್ನೇ ಮುಂದುವರಿಸುವ ಮುನ್ಸೂಚನೆ ಇದಾಗಿದೆ. ಇನ್ನು ಹಿರಿಯ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆಯು ಅವರ ಜನ್ಮಸ್ಥಳವಾದ ಪವಿತ್ರ ನಗರ ಮಶಾದ್‌ನಲ್ಲಿ ನಡೆಯಲಿದ್ದು, ಇರಾನ್‌ನಾದ್ಯಂತ 40 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. #Tehran




