
ಮಧ್ಯಪ್ರಾಚ್ಯದ ಉದ್ವಿಗ್ನತೆ ಈಗ ಸಮುದ್ರದ ಒಡಲಲ್ಲಿ ಸ್ಫೋಟಕ ರೂಪ ಪಡೆದುಕೊಂಡಿದೆ. ತನ್ನ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ ಇರಾನ್, ವಿಶ್ವದ ಅತಿ ದೊಡ್ಡ ತೈಲ ಸಾಗಾಣಿಕೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ‘ನೇವಲ್ ಮೈನ್ಸ್’ ಅಳವಡಿಸಿದೆ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಭೂಮಿಯ ಆಳದಲ್ಲಿ ನಕ್ಸಲರು ಇಡುವ ನೆಲಬಾಂಬ್‌ಗಳಂತೆಯೇ ಕಾರ್ಯನಿರ್ವಹಿಸುವ ಈ ನೇವಲ್ ಮೈನ್ಸ್‌ಗಳು, ಹಡಗುಗಳ ಶಬ್ದ ಅಥವಾ ನೀರಿನ ಒತ್ತಡವನ್ನು ಪತ್ತೆಹಚ್ಚಿ ಕ್ಷಣಾರ್ಧದಲ್ಲಿ ಬೃಹತ್ ಹಡಗುಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿವೆ.
ಇರಾನ್‌ನ ಈ ನಡೆಯಿಂದ ಕೆರಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಕ್ಷಣವೇ ಸ್ಫೋಟಕಗಳನ್ನು ತೆರವುಗೊಳಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಸ್ಫೋಟಕಗಳನ್ನು ತೆಗೆಯದಿದ್ದರೆ ಇರಾನ್ ಮೇಲೆ ಹಿಂದೆಂದೂ ಕಾಣದ ಭೀಕರ ಮಿಲಿಟರಿ ದಾಳಿ ನಡೆಸಲಾಗುವುದು ಎಂದು ಗುಡುಗಿದ್ದಾರೆ. ಸಮುದ್ರದಲ್ಲಿ ಸ್ಫೋಟಕಗಳನ್ನು ಅಳವಡಿಸುತ್ತಿದ್ದ ಇರಾನ್‌ನ 16 ಹಡಗುಗಳನ್ನು ಅಮೆರಿಕದ ಪಡೆಗಳು ಈಗಾಗಲೇ ನಾಶಪಡಿಸಿರುವುದಾಗಿ ವರದಿಯಾಗಿದೆ.
ಕ್ಷಿಪಣಿಗಳಿಗಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಈ ನೇವಲ್ ಮೈನ್ಸ್‌ಗಳು ಶತ್ರು ರಾಷ್ಟ್ರಗಳ ನೌಕೆಗಳಿಗೆ ಭಾರಿ ಹಾನಿ ಉಂಟುಮಾಡುತ್ತವೆ. ಅಮೆರಿಕದ ಅಂದಾಜಿನ ಪ್ರಕಾರ, ಇರಾನ್ ಬಳಿ ಸುಮಾರು 2,000 ರಿಂದ 5,000 ದಷ್ಟು ಸುಧಾರಿತ ನೇವಲ್ ಮೈನ್ಸ್‌ಗಳ ಸಂಗ್ರಹವಿದೆ. ಚೀನಾ ಮತ್ತು ರಷ್ಯಾ ತಂತ್ರಜ್ಞಾನದ ನೆರವಿನಿಂದ ಅಭಿವೃದ್ಧಿಪಡಿಸಲಾದ ಈ ಸ್ಫೋಟಕಗಳು ಸಮುದ್ರದ ತಳದಲ್ಲಿ ಅಥವಾ ನೀರಿನಲ್ಲಿ ತೇಲುತ್ತಾ ಹಡಗುಗಳ ಕಾಂತೀಯ ಕ್ಷೇತ್ರವನ್ನು ಗುರುತಿಸಿ ಸ್ಫೋಟಗೊಳ್ಳುತ್ತವೆ. ಈ ಹೈಡ್ರಾಮಾದಿಂದಾಗಿ ಜಾಗತಿಕ ತೈಲ ಪೂರೈಕೆಯ ಮೇಲೆ ಭಾರಿ ಪರಿಣಾಮ ಬೀರುವ ಆತಂಕ ಎದುರಾಗಿದೆ.




