ರಾಜಕೀಯರಾಜ್ಯಸುದ್ದಿ

ಒಳ ಮೀಸಲಾತಿ ಜಟಾಪಟಿ; ಖರ್ಗೆ ಭೇಟಿ ಮಾಡಿದ ಮುನಿಯಪ್ಪ-ತಿಮ್ಮಾಪುರ ಜೋಡಿ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಒಳ ಮೀಸಲಾತಿ ಜಾರಿ ಕುರಿತಾದ ಜಟಾಪಟಿ ಈಗ ಹೈಕಮಾಂಡ್ ಅಂಗಳ ತಲುಪಿದ್ದು, ಈ ವಿಷಯವಾಗಿ ದಲಿತ ಎಡಗೈ ಸಮುದಾಯದ ಪ್ರಮುಖ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸಚಿವರಾದ ಕೆ.ಎಚ್. ಮುನಿಯಪ್ಪ ಮತ್ತು ಆರ್.ಬಿ. ತಿಮ್ಮಾಪುರ ಅವರು ದೆಹಲಿಯಲ್ಲಿ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಸಮುದಾಯದ ಬೇಡಿಕೆಗಳನ್ನು ಮಂಡಿಸಿದ್ದಾರೆ.

ಈ ಹಿಂದೆ ಸಚಿವರಾದ ಡಾ. ಜಿ. ಪರಮೇಶ್ವರ್ ಮತ್ತು ಎಚ್.ಸಿ. ಮಹದೇವಪ್ಪ ಕೂಡ ಖರ್ಗೆ ಅವರನ್ನು ಭೇಟಿ ಮಾಡಿದ್ದ ಹಿನ್ನೆಲೆಯಲ್ಲಿ, ಈ ಭೇಟಿಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಒಳ ಮೀಸಲಾತಿ ಹಂಚಿಕೆಯ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ತಲೆದೂರಿರುವ ಬೆನ್ನಲ್ಲೇ ಈ ಸಂಧಾನದ ಪ್ರಯತ್ನಗಳು ಚುರುಕುಗೊಂಡಿವೆ.ನಾಯಕರ ಅಹವಾಲು ಆಲಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಒಳ ಮೀಸಲಾತಿ ವಿಚಾರದಲ್ಲಿ ಯಾರಿಗೂ ಅನ್ಯಾಯವಾಗಬಾರದು ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಎಲ್ಲ ನಾಯಕರು ಒಟ್ಟಿಗೆ ಕುಳಿತು ಮಾತನಾಡಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಮತ್ತು ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಮೀಸಲಾತಿಯನ್ನು ಸಮನಾಗಿ ಹಂಚಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಒಗ್ಗಟ್ಟಿನಿಂದ ಇದ್ದರೆ ಮಾತ್ರ ಸಮುದಾಯದ ಹಿತ ಕಾಪಾಡಲು ಸಾಧ್ಯ ಎಂದು ಖರ್ಗೆ ಅವರು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಖರ್ಗೆ ಅವರ ಈ ಸಂಧಾನದ ಸೂತ್ರಕ್ಕೆ ಎಡಗೈ ನಾಯಕರು ಕೂಡ ಸಮ್ಮತಿ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಪರಮೇಶ್ವರ್ ಮತ್ತು ಮಹದೇವಪ್ಪ ಅವರೊಂದಿಗೆ ಚರ್ಚಿಸಿ ಒಮ್ಮತಕ್ಕೆ ಬರುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರಾದ ತಿಮ್ಮಾಪುರ ಮತ್ತು ಮುನಿಯಪ್ಪ, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಒಟ್ಟು 101 ಉಪಜಾತಿಗಳಿಗೆ ಯಾವುದೇ ಅನ್ಯಾಯವಾಗದಂತೆ ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗೊಂದಲಗಳನ್ನು ಪರಿಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. ಸರ್ಕಾರ ಮತ್ತು ಪಕ್ಷದ ಹಿತದೃಷ್ಟಿಯಿಂದ ಒಳ ಮೀಸಲಾತಿಯ ಜಟಿಲ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಈಗ ಸಂಧಾನದ ಹಾದಿ ಹಿಡಿದಿದ್ದಾರೆ.

Comments (0)

Your email address will not be published. Required fields are marked *

Back to top button