mangalore

ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ; ಆರೋಪ ಸುಳ್ಳು ಎಂದ ಮಂಗಳೂರು ಪೊಲೀಸರು!

ಮಂಗಳೂರು: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಎಂಬುವವರು ಮಾಡಿದ್ದ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ಆರೋಪಗಳು ಸುಳ್ಳು ಮತ್ತು ಪ್ರೇರಿತ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ ನೇತೃತ್ವದಲ್ಲಿ ನಡೆದ ಪ್ರಾಥಮಿಕ ತನಿಖೆಯ ವರದಿಯ ಅನ್ವಯ, ಮಹಿಳೆಯರಿಗೆ ಇನ್ಸ್‌ಪೆಕ್ಟರ್ ಯಾವುದೇ ಕಿರುಕುಳ ನೀಡಿಲ್ಲ ಮತ್ತು ಅವರು ಯಾರದ್ದೋ ಪ್ರಚೋದನೆಗೆ ಒಳಗಾಗಿ ಈ ಸುಳ್ಳು ಆರೋಪ ಮಾಡಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ವೈರಲ್ ಆಗಿದ್ದ ಆಡಿಯೋ ಮತ್ತು ವಿಡಿಯೋಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆಡಿಯೋದಲ್ಲಿರುವ ಮಹಿಳೆಯರು ಅದು ತಮ್ಮದೇ ಧ್ವನಿ ಎಂದು ಒಪ್ಪಿಕೊಂಡಿದ್ದರೂ, ದೂರು ನೀಡಲು ಇಷ್ಟವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಈ ಆಡಿಯೋ ಮತ್ತು ವಿಡಿಯೋಗಳು ಹಳೆಯದಾಗಿದ್ದು, ಅದರಲ್ಲಿರುವ ಸಂಭಾಷಣೆಗಳು ಅಸಭ್ಯ ವರ್ತನೆಯನ್ನು ಸ್ಪಷ್ಟಪಡಿಸುತ್ತವೆ. ಮಹಿಳೆಯರು ದೂರು ನೀಡಲು ಹಿಂದೇಟು ಹಾಕಿದ ಮಾತ್ರಕ್ಕೆ ಇನ್ಸ್‌ಪೆಕ್ಟರ್ ನಡೆ ಸರಿಯೆಂದು ಹೇಳಲಾಗುವುದಿಲ್ಲ ಎಂಬ ಚರ್ಚೆಯೂ ತನಿಖಾ ವರದಿಯ ಬೆನ್ನಲ್ಲೇ ಕೇಳಿಬರುತ್ತಿದೆ.

ಪೊಲೀಸ್ ಇಲಾಖೆಯ ಈ ವರದಿಯನ್ನು ದೂರುದಾರೆ ಸುಮತಿ ನಾಯಕ್ ಅವರು ಕಟುವಾಗಿ ಟೀಕಿಸಿದ್ದಾರೆ. “ತನಿಖೆ ನಡೆಸಿದ ಎಸಿಪಿ ಶ್ರೀಕಾಂತ್ ಅವರೂ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಕಮಿಷನರ್, ಎಸಿಪಿ ಮತ್ತು ಇನ್ಸ್‌ಪೆಕ್ಟರ್ ನಡುವೆ ‘ಚೈನ್ ಲಿಂಕ್’ ಇದೆ. ಆರೋಪಿಗಳೇ ಸೇರಿ ತಮ್ಮ ಪರವಾಗಿ ವರದಿ ತಯಾರಿಸಿಕೊಂಡಿದ್ದಾರೆ” ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಮಂಗಳೂರು ಮಟ್ಟದ ಅಧಿಕಾರಿಗಳ ತನಿಖೆಯ ಮೇಲೆ ನಂಬಿಕೆಯಿಲ್ಲದ ಕಾರಣ, ರಾಜ್ಯಮಟ್ಟದ ಅಧಿಕಾರಿಗಳಿಂದ ಅಥವಾ ಬೆಂಗಳೂರು ಮೂಲದ ಅಧಿಕಾರಿಗಳಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಸಿಎಂ ಮತ್ತು ಗೃಹ ಸಚಿವರಿಗೆ ಆಗ್ರಹಿಸಿದ್ದಾರೆ.

ಸದ್ಯ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತ್ತಿನಲ್ಲೇ ಇದ್ದು, ತನಿಖಾ ವರದಿ ಬಂದ ಬಳಿಕ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದೆ. ದೂರುದಾರರು ಈ ವರದಿಯನ್ನು ತಿರಸ್ಕರಿಸಿರುವುದರಿಂದ, ಸರ್ಕಾರ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ತನಿಖೆಗೆ ಆದೇಶಿಸುತ್ತದೆಯೇ ಅಥವಾ ಇಲಾಖಾ ತನಿಖೆಯ ವರದಿಯನ್ನೇ ಅಂತಿಮಗೊಳಿಸುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

Comments (0)

Your email address will not be published. Required fields are marked *

Back to top button