ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಹಾಗೂ ಐಐಎಸ್ಸಿ ಮಾಜಿ ನಿರ್ದೇಶಕ ಬಲರಾಮ್ ಮತ್ತು ಇತರ 16 ಜನರ ವಿರುದ್ಧ ಎಸ್ಸಿ / ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
71ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಧಿಕಾರಿಗಳು ತಮ್ಮನ್ನು ಸೇವೆಯಿಂದ ತಪ್ಪಾಗಿ ವಜಾಗೊಳಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನ್ನನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿ ಸುಳ್ಳು ಆರೋಪ ಹೊರೆಸಿ ಸಿಲುಕಿಸಲಾಗಿದೆ. ಜತೆಗೆ ಕ್ರಿಸ್ ಗೋಪಾಲಕೃಷ್ಣನ್ ಟ್ರಸ್ಟಿಗಳ ಮಂಡಳಿಯ ಸದಸ್ಯರಾಗಿರುವ ಸಂಸ್ಥೆಯಿಂದ ವಜಾಗೊಳಿಸಲಾಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ದೂರುದಾರ ದುರ್ಗಪ್ಪ, ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಸಂಸ್ಥೆಯ ಅಧಿಕಾರಿಗಳು ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದುರ್ಗಪ್ಪ ಅವರು ಸಂಸ್ಥೆಯ ಸೆಂಟರ್ ಫಾರ್ ಸಸ್ಟೈನಬಲ್ ಟೆಕ್ನಾಲಜಿಯಲ್ಲಿ ಅಧ್ಯಾಪಕರಾಗಿದ್ದರು. 2014 ರಲ್ಲಿ ಹನಿ ಟ್ರ್ಯಾಪ್ ಪ್ರಕರಣದಲ್ಲಿ ತನ್ನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲಾಗಿದೆ. ಪ್ರಕರಣದ ವಿಚಾರಣೆಯ ಆಧಾರದ ಮೇಲೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ತನ್ನನ್ನು ಬೋಧಕ ಹುದ್ದೆಯಿಂದ ತೆಗೆದುಹಾಕಲು ಅಧಿಕಾರಿಗಳು ತಮ್ಮ ವಿರುದ್ಧ ಈ ಹನಿ ಟ್ರ್ಯಾಪ್ ಪಿತೂರಿ ನಡೆಸಿದ್ದಾರೆ ಎಂದು ದುರ್ಗಪ್ಪ ದೂರಿದ್ದು, ಅಧಿಕಾರಿಗಳು ಜಾತಿನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಿದ್ದರು
ಗೋಪಾಲಕೃಷ್ಣನ್ ಸೇರಿದಂತೆ ಗೋವಿಂದನ್ ರಂಗರಾಜನ್, ಶ್ರೀಧರ್ ವಾರಿಯರ್, ಸಂಧ್ಯಾ ವಿಶ್ವೇಶ್ವರಯ್ಯ, ಹರಿ ಕೆವಿಎಸ್, ದಾಸಪ್ಪ, ಬಲರಾಮ್ ಪಿ, ಹೇಮಲತಾ ಮಿಶಿ, ಚಟ್ಟೋಪಾಧ್ಯಾಯ ಕೆ, ಪ್ರದೀಪ್ ಡಿ ಸಾವ್ಕರ್ ಮತ್ತು ಮನೋಹರನ್ ಸೇರಿದಂತೆ ಹಲವು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.