ಮುಂಬೈ: 2010 ರಲ್ಲಿ ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯವಾಡಿದ್ದ ಶಿಖರ್ ಧವನ್, ಐಪಿಎಲ್ ಮೆಗಾ ಹರಾಜಿಗೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 38 ವರ್ಷ ವಯಸ್ಸಿನ ಧವನ್ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. 2022 ರಲ್ಲಿ ಶಿಖರ್ ಧವನ್ ಕೊನೆಯ ಬಾರಿಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು.
2022ರ ಬಾಂಗ್ಲಾದೇಶ ಪ್ರವಾಸದ ನಂತರ ಧವನ್ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇದಾಗ್ಯೂ ಅವರು ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಅದರಲ್ಲೂ ದುಲೀಪ್ ಟ್ರೋಫಿಗೆ ಆಯ್ಕೆ ಮಾಡಲಾದ ನಾಲ್ಕು ತಂಡಗಳಲ್ಲೂ ಅವರ ಹೆಸರು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ನಿವೃತ್ತಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ನನ್ನ ಕ್ರಿಕೆಟ್ ಪಯಣದ ಈ ಅಧ್ಯಾಯವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಈ ಪ್ರಯಾಣದಲ್ಲಿ ನಾನು ನನ್ನೊಂದಿಗೆ ಅಸಂಖ್ಯಾತ ನೆನಪುಗಳು ಮತ್ತು ಕೃತಜ್ಞತೆಯನ್ನು ಹೊಂದಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು! ಜೈ ಹಿಂದ್!” ಎಂದು ಧವನ್ ವಿಡಿಯೋದಲ್ಲಿ ಹೇಳಿದ್ದಾರೆ.