ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೆಳಿಗ್ಗೆ 9.30 ರಿಂದ ಶುರುವಾಗಬೇಕಿದ್ದ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಬೆಳಿಗ್ಗೆ 9 ಗಂಟೆಗೆ ನಡೆಯಬೇಕಿದ್ದ ಟಾಸ್ ಪ್ರಕ್ರಿಯೆಯನ್ನು ಮುಂದೂಡಲಾಗಿದ್ದು, ಮಳೆ ನಿಲ್ಲುವ ಸೂಚನೆ ಸಿಕ್ಕ ಬಳಿಕವಷ್ಟೇ ಟಾಸ್ ನಡೆಯಲಿದೆ. ಆದರೆ ಬುಧವಾರ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದ್ದು, ಹೀಗಾಗಿ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ನಡೆಯುವುದು ಅನುಮಾನ.
ಇಂದು ಬೆಳಗ್ಗೆ 9:30 ಕ್ಕೆ ಮ್ಯಾಚ್ ಆರಂಭವಾಗಬೇಕಿದೆ. ಆದರೆ, ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೇ ನಗರದಲ್ಲಿ ಮಳೆ ಸುರಿಯುತ್ತಿದ್ದು, ಇಂದು ಕೂಡ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
ಮೊದಲ ಟೆಸ್ಟ್‌ನ ಮುನ್ನಾದಿನ ಅಂದರೆ ಮಂಗಳವಾರ ಬೆಂಗಳೂರಲ್ಲಿ ಭಾರೀ ಮಳೆಯು ಮುಂದುವರೆಯಿತು. ಇದರಿಂದಾಗಿ ಭಾರತವು ತನ್ನ ಅಭ್ಯಾಸದ ಅವಧಿಯನ್ನು ರದ್ದುಗೊಳಿಸಿತ್ತು. ಹವಾಮಾನ ವರದಿಗಳ ಪ್ರಕಾರ, ಮೋಡ ಕವಿದ ಆಕಾಶ ಮತ್ತು ಮಳೆಯು ದಿನವಿಡೀ ಆಗುವ ಸಾಧ್ಯತೆ ಇದೆ. ಇದು ಟೆಸ್ಟ್ ಸರಣಿಯ ಮೊದಲ ದಿನದ ಮೇಲೆ ಪರಿಣಾಮ ಬೀರಬಹುದು.
ಚಿನ್ನಸ್ವಾಮಿ ಕ್ರೀಡಾಂಗಣವು ಉತ್ತಮ ಗುಣಮಟ್ಟದ ಒಳಚರಂಡಿ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಇದನ್ನು ದೇಶದಲ್ಲೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಸಬ್‌ಏರ್ ವ್ಯವಸ್ಥೆಯು ಮಳೆ ನಿಂತ ಬಳಿಕ ಕೇವಲ 15 ನಿಮಿಷಗಳ ನಂತರ ಆಟಕ್ಕೆ ಮೈದಾನವನ್ನು ಸಿದ್ಧಪಡಿಸುತ್ತದೆ.
ಇದುವರೆಗೆ ಭಾರತ ಮತ್ತು ನ್ಯೂಜಿಲೆಂಡ್ 62 ಪಂದ್ಯಗಳನ್ನು ಆಡಿವೆ. ಅದರಲ್ಲಿ ಭಾರತವು 22 ಹಾಗೂ ನ್ಯೂಜಿಲೆಂಡ್ 13 ಪಂದ್ಯಗಳಲ್ಲಿ ಜಯಗಳಿಸಿವೆ. 27 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಝ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೇಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.
ನ್ಯೂಝಿಲೆಂಡ್ ಟೆಸ್ಟ್ ತಂಡ: ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಓ’ರೂರ್ಕ್, ಅಜಾಝ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಕೇನ್ ವಿಲಿಯಮ್ಸನ್ (ಮೊದಲ ಪಂದ್ಯಕ್ಕೆ ಅಲಭ್ಯ), ಜೇಕೊಬ್ ಡಫಿ, ವಿಲ್ ಯಂಗ್, ಮೈಕೆಲ್ ಬ್ರೇಸ್‌ವೆಲ್ (ಮೊದಲನೇ ಟೆಸ್ಟ್ಗೆ ಮಾತ್ರ), ಇಶ್ ಸೋಧಿ (ಮೊದಲ ಪಂದ್ಯಕ್ಕೆ ಅಲಭ್ಯ).